ಕನ್ನಡಪ್ರಭ ವಾರ್ತೆ ಮುಧೋಳ
ಹೆಸ್ಕಾಂ ಅಧಿಕಾರಿಗಳು ಚಾಕಚಕ್ಕತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರು ತಮ್ಮ ಇಲಾಖೆಗೆ ಬಂದಾಗ ತತಕ್ಷಣೆ ಕೆಲಸ ಮಾಡಿಕೊಡಬೇಕು. ಯಾವುದೇ ಗ್ರಾಹಕರಿಂದ ತಮಗೆ ದೂರಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ನಗರದ ಹೆಸ್ಕಾಂ ವಿಭಾಗ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನೂತನ ಕಟ್ಟಡದ ನಿರ್ಮಾಣದಿಂದ ಹೆಸ್ಕಾಂ ವಿಭಾಗದ ಸೇವೆಗಳು ಇನ್ನಷ್ಟು ಸುಗಮಗೊಳ್ಳಲಿವೆ. ಮುಧೋಳ ಹಾಗೂ ಸುತ್ತ-ಮುತ್ತಲಿನ ಪ್ರದೇಶದ ಜನರಿಗೆ ವಿದ್ಯುತ್ ಸರಬರಾಜು ಹೆಚ್ಚು ವಿಶ್ವಾಸಾರ್ಹವಾಗಿ, ತ್ವರಿತವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮದು ಪ್ರಥಮ ಆದ್ಯತೆ. ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ಸೌಲಭ್ಯಗಳನ್ನು ಬಲಪಡಿಸಲು ಬದ್ಧವಾಗಿದೆ. ಈ ಕಟ್ಟಡದ ಮೂಲಕ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಉತ್ತಮ ಕಾರ್ಯಪರಿಸರ ದೊರೆಯಲಿದ್ದು, ಜನರ ಸೇವೆಯ ಗುಣಮಟ್ಟ ಮತ್ತಷ್ಟು ಉನ್ನತೀಕರಣಗೊಳ್ಳಲಿದೆ ಎಂದರು.ಮುಧೋಳ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇನ್ನೂ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸುವ ಉದ್ದೇಶವಿದ್ದು, ಭೂಮಿಯ ಕೊರತೆ ಇರುವುದು ಕಾರಣ ರೈತರು ಸ್ವಇಚ್ಛೆಯಿಂದ ಭೂಮಿ ನೀಡಿದರೇ ಹೆಚ್ಚು ಅನುಕೂಲವಾಗಲಿದೆ ಎಂದರು.
ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಇಂದು ಪ್ರತಿಯೊಬ್ಬರೂ ವಿದ್ಯುತ್ ಮೇಲೆ ಅವಲಂಬಿತರಾಗಿದ್ದಾರೆ. ಲೈನ್‌ಮ್ಯಾನ್‌ಗಳು ವಿದ್ಯುತ್ ಇಲಾಖೆಯ ಜೀವಾಳ ಇದ್ದಂತೆ. ಅಧಿಕಾರಿಗಳು ಅವರನ್ನು ಗೌರವದಿಂದ ನೋಡಿಕೊಳ್ಳಬೇಕು. ಶಾಸಕರು ಶಿಫಾರಸ್ ಮಾಡಿರುವ ಸಾರ್ವಜನಿಕ ಕೆಲಸಗಳನ್ನು ಅಧಿಕಾರಿಗಳು ತತಕ್ಷಣವೇ ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿದರು.ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಪೀರ್ ಎಸ್.ಖಾದ್ರಿ ಮಾತನಾಡಿ, ಹೆಸ್ಕಾಂ ಇಲಾಖೆಯ ವಿವಿಧ ಯೋಜನೆಗಳನ್ನು ಗ್ರಾಹಕರಿಗೆ ಸರಳವಾಗಿ ತಲುಪುವಂತೆ ಅಧಿಕಾರಿಗಳು ನಿಗಾವಹಿಸಬೇಕು. ಲೈನ್‌ಮ್ಯಾನ್‌ಗಳಿಗೆ ವಿಶೇಷ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವೆ. ಹೆಸ್ಕಾಂ ಸಿಬ್ಬಂದಿ ಟೀಮ್ ವರ್ಕ್ ಮಾಡಬೇಕು. ಗ್ರಾಹಕರಿಂದ ಯಾವುದೇ ದೂರುಗಳು ಬಾರದಂತೆ ಕರ್ತವ್ಯನಿರತರಾಗಿ ಸೇವೆ ಒದಗಿಸಬೇಕು ಎಂದು ತಿಳಿಸಿದರು.ಹೆಸ್ಕಾಂ ತಾಂತ್ರಿಕ ನಿರ್ದೇಶಕ ಎಸ್.ಜಗದೀಶ ಮಾತನಾಡಿ, ಸಾರ್ವಜನಿರಕರಿಂದ ಯಾವುದೇ ದೂರುಗಳು ಬಾರದಂತೆ ನೋಡಿಕೊಳ್ಳುವ ಭರವಸೆ ನೀಡಿದರು.ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಮುಧೋಳ ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮಣ್ಣವರ, ಉಪಾಧ್ಯಕ್ಷ ಭೀಮಪ್ಪ ರಾ.ಮೆಟಗುಡ್ಡ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಮಹಾಂತೇಶ ಮಾಚಕನೂರ, ಹೆಸ್ಕಾಂ ಆರ್ಥಿಕ ವಿಭಾಗದ ಸಲಹೆಗಾರ ಮತ್ತು ಮುಖ್ಯ ಆರ್ಥಿಕ ಅಧಿಕಾರಿ ಆರ್.ಎನ್.ಸಬರದ, ಹೆಸ್ಕಾಂ ಬೆಳಗಾವಿ ವಲಯದ ಮುಖ್ಯ ಇಂಜನಿಯರ್ ಪ್ರವೀಣಕುಮಾರ ಕೆ.ಚಿಕಡೆ, ಹೆಸ್ಕಾಂ ಬೆಳಗಾವಿ ವಲಯ ಕಚೇರಿಯ ಸಿವಿಲ್ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್ ಬಿ.ವೈ.ಹೊಳಿಗಾರ, ಹೆಸ್ಕಾಂ ಬಾಗಲಕೋಟೆ ವಲಯದ ಕಾರ್ಯಕಾರಣಿ ಮುಖ್ಯ ಇಂಜನಿಯರ್ ಎನ್.ಎ.ಮಾಹೂರಕರ, ಹೆಸ್ಕಾಂ ಕಚೇರಿಯ ಸಿವಿಲ್ ವಿಭಾಗದ ಅಧೀಕ್ಷಕ ಇಂಜನಿಯರ್ ತಿಪ್ಪಣ್ಣ ಎಚ್, ಹೆಸ್ಕಾಂ ಮುಧೋಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್ ಎಂ.ಎಸ್.ದಡೂತಿ ವೇದಿಕೆ ಮೇಲಿದ್ದರು. ಹೆಸ್ಕಾಂ ಕಾರ್ಯ ಮತ್ತು ಪಾಲನಾ ಮುಧೋಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ ಮೆಟಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಸ್ಕಾಂ ಕಾರ್ಯ ಮತ್ತು ಪಾಲನಾ ಬಾಗಲಕೋಟೆ ವೃತ್ತದ ಅಧೀಕ್ಷಕ ಅಭಿಯಂತರ್ ಸಿ.ಬಿ.ಯಂಕಂಚಿ ಸ್ವಾಗತಿಸಿದರು. ಕಿರಿಯ ಅಭಿಯಂತರ ಹಣಮಂತ ಅಟಕ ಪ್ರಾರ್ಥನೆ ಹೇಳಿದರು. ಹಣಮಂತ ಸೋರಗಾಂವ ನಾಡಗೀತೆ ಹೇಳಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಹೆಸ್ಕಾಂ ಸಿಬ್ಬಂದಿ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.ನಾನು ಶಾಸಕನಾಗಿ, ಸಚಿವನಾಗಿ ಮುಧೋಳ ಮತಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ.
-ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವರು.