ಸಾರಾಂಶ
ಕೊಪ್ಪಳ:
ಮಾ. 20 ಮತ್ತು 21ರಂದು ಕನಕಗಿರಿ ಉತ್ಸವ ನಡೆಸಲು ನಿರ್ಧರಿಸಿದ್ದು, ಅದ್ಧೂರಿ ಹಾಗೂ ವ್ಯವಸ್ಥಿತ ಉತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನಕಗಿರಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕಗಿರಿಯ ಜಾತ್ರೆಯೊಂದಿಗೆ ಉತ್ಸವ ಆಚರಿಸಬೇಕೆಂಬುವುದು ಜನರ ಒತ್ತಾಯ. ಹೀಗಾಗಿ ಎರಡು ಒಟ್ಟಿಗೆ ಮಾಡಲಾಗುತ್ತಿದೆ ಎಂದ ಅವರು, ಸ್ವಾಗತ ಸಮಿತಿ, ಶಿಷ್ಟಾಚಾರ, ಮೆರವಣಿಗೆ, ಸಾಂಸ್ಕೃತಿಕ, ವಸತಿ, ಕ್ರೀಡಾ, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಮೂಲಭೂತ ಸೌಕರ್ಯಗಳ ಸಮಿತಿ, ಸಾರಿಗೆ ಸೇರಿದಂತೆ ಇತರ ಸಮಿತಿ ಕೂಡಲೇ ರಚಿಸಬೇಕು. ಎಲ್ಲ ಸಮಿತಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಸಮಿತಿಗಳು ಕಾರ್ಯಕ್ರಮಗಳ ಯೋಜನೆ ರೂಪಿಸಿ, ತಮ್ಮ ಬೇಡಿಕೆಗಳನ್ನು ಮಾ. 5ರೊಳಗಾಗಿ ಸಲ್ಲಿಸಬೇಕು ಎಂದರು.
ಉತ್ಸವದಲ್ಲಿ ಈ ಬಾರಿ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಜನರ ಆಕರ್ಷಿಸಿ. ಈ ಪಂದ್ಯ ಎರಡು ದಿನ ನಡೆಯಬೇಕು. ಕನಿಷ್ಠ 20ರಿಂದ 30 ತಂಡ ಭಾಗವಹಿಸುವಂತೆ ನೋಡಿಕೊಳ್ಳಿ. ಜತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಕ್ರಿಕೆಟ್ ಪಂದ್ಯ ಸಹ ಹಮ್ಮಿಕೊಳ್ಳಲು ನೋಡಿಕೊಳ್ಳಬೇಕು. ಉತ್ಸವಕ್ಕೆ ಬರುವ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.ಆರೋಗ್ಯ ಶಿಬಿರ, ಕವಿಗೋಷ್ಠಿಗಾಗಿ ಪ್ರತ್ಯೇಕ ಸಮಿತಿ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೂ ಕ್ರಮವಹಿಸಿ. ಉತ್ಸವ ಸಂದರ್ಭದಲ್ಲಿ ಕನಕಗಿರಿ ಪಟ್ಟಣ, ದೇವಸ್ಥಾನ, ವೇದಿಕೆ ಮಾರ್ಗ ಹಾಗೂ ಐತಿಹಾಸಿಕ ಸ್ಮಾರಕ ಸ್ಥಳಗಳಲ್ಲಿ ವಿದ್ಯುತ್ ದೀಪಾಲಂಕಾರ, ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಬ್ಯಾನರ್ ಅಳವಡಿಕೆ ಮತ್ತು ಬಸ್‌ಗಳ ಮೇಲೆ ಉತ್ಸವದ ಪೋಸ್ಟರ್ ಲಗತ್ತಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಕೊಪ್ಪಳ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಗಂಗಾವತಿ ತಹಸೀಲ್ದಾರ್ ಯು. ನಾಗರಾಜ್, ಕನಕಗಿರಿ ತಹಸೀಲ್ದಾರ್ ವಿಶ್ವನಾಥ್ ಮುರಡಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.