ಜೆಡಿಎಸ್ ಬಲಿಷ್ಠಗೊಳಿಸಲು ಅಭಿಯಾನ ಯಶಸ್ವಿಗೊಳಿಸಿ

| Published : Aug 13 2025, 12:30 AM IST

ಜೆಡಿಎಸ್ ಬಲಿಷ್ಠಗೊಳಿಸಲು ಅಭಿಯಾನ ಯಶಸ್ವಿಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ರೈತರು, ಬಡವರು, ಮಹಿಳೆಯರು ಹಾಗೂ ಶೋಷಿತರ ಪರವಾಗಿರುವ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಗೊಳಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಹೇಳಿದರು.

ರಾಮನಗರ: ರೈತರು, ಬಡವರು, ಮಹಿಳೆಯರು ಹಾಗೂ ಶೋಷಿತರ ಪರವಾಗಿರುವ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಕಾರ್ಯಕರ್ತರು ಯಶಸ್ವಿಗೊಳಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಹೇಳಿದರು.

ನಗರದ ರಾಯರದೊಡ್ಡಿ ವೃತ್ತದಲ್ಲಿ 27ನೇ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಸದಸ್ಯರಾಗಲು ಮಿಸ್ ಕಾಲ್‌ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಬೇಕು ಎಂದು ಹೇಳಿದರು.

ಜೆಡಿಎಸ್ ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿಯೇ ರಾಮನಗರ ತಾಲೂಕು ಮೊದಲ ಸ್ಥಾನದಲ್ಲಿದೆ. ಈವರೆಗೆ 85 ಗ್ರಾಮಗಳಲ್ಲಿ 13 ಸಾವಿರ ಮನೆಗಳಿಗೆ ತೆರಳಿ ಸದಸ್ಯತ್ವ ಮಾಡಲಾಗಿದೆ. ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ರಾಮನಗರ ಕ್ಷೇತ್ರದಲ್ಲಿ 2.50 ಲಕ್ಷ ಮತದಾರರಿದ್ದು ಕನಿಷ್ಡ 1 ಲಕ್ಷ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬೇರೆ ಪಕ್ಷಗಳು ಕೂಡ ಡಿಜಿಟಲ್ ನೋಂದಣಿ ಮಾಡಿದ್ದು, ಇತರೆ ಪಕ್ಷಗಳಿಗಿಂತ ಮತದಾರರು ಜೆಡಿಎಸ್ ಪಕ್ಷದ ನೋಂದಣಿಗೆ ಹೆಚ್ಚಿನ ಆಸಕ್ತಿಯಿಂದ ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ನ ಲೂಟಿ ಸರ್ಕಾರದ ವಿರುದ್ಧ ಬೇಸತ್ತಿರುವ ಜನರು ಜೆಡಿಎಸ್ ಪಕ್ಷಕ್ಕೆ ಮನ್ನಣೆ ನೀಡುತ್ತಿದ್ದಾರೆ ಎಂದು ಸಬ್ಬಕೆರೆ ಶಿವಲಿಂಗಯ್ಯ ಹೇಳಿದರು.

ಜೆಡಿಎಸ್ ಮುಖಂಡ ಅಂಜನಾಪುರ ವಾಸು ಮಾತನಾಡಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುತ್ತಿದೆ. ಈ ಕಾರ್ಯಕ್ಕೆ ಕಾರ್ಯಕರ್ತರು ಕೈ ಜೋಡಿಸುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದು ತಿಳಿಸಿದರು.

ಗ್ರಾಮಗಳಲ್ಲಿ ಕನಿಷ್ಟ ಶೇಕಡ 50ರಷ್ಟು ಜನರನ್ನು ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಅದೇ ರೀತಿ ನಗರ ಪ್ರದೇಶಗಳಲ್ಲಿ ಕನಿಷ್ಟ 60ರಷ್ಟು ಜನರನ್ನು ನೋಂದಣಿ ಮಾಡಿದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಅರಿವು ಮೂಡಿಸಬೇಕು. ರೈತರ ಪಕ್ಷ ಜೆಡಿಎಸ್ ಅನ್ನು ಉಳಿಸಿಕೊಳ್ಳಲು ನೋಂದಣಿ ಅಗತ್ಯವಿದೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕವೀರೇಗೌಡ ಮಾತನಾಡಿ, ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಜೆಡಿಎಸ್ ಸದಸ್ಯತ್ವ ನಡೆಯುತ್ತಿದ್ದು, ಪ್ರತಿ ಮನೆ ಮನೆಗೆ ಭೇಟಿ ನೀಡಬೇಕಿದೆ. ಪ್ರತಿ ಚುನಾವಣೆಯಲ್ಲಿ 27ನೇ ವಾರ್ಡ್ ಜೆಡಿಎಸ್ ಪಕ್ಷಕ್ಕೆ ಲೀಡ್ ಕೊಡುತ್ತಲೇ ಬಂದಿದೆ. ಈಗ ಅಭಿಯಾನ ಯಶಸ್ವಿಗೊಳಿಸುವ ಮೂಲಕ ಎಚ್.ಡಿ.ದೇವೇಗೌಡ , ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಬಲ ಪಡಿಸೋಣ ಎಂದರು.

ಜೆಡಿಎಸ್ ಮುಖಂಡರಾದ ಕೆ.ಚಂದ್ರಯ್ಯ ಮತ್ತು ಬಿ.ಉಮೇಶ್ ಮಾತನಾಡಿ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ, ಸಂಘಟನೆಗೆ ಬಲ‌ನೀಡುವ ಕೆಲಸ ಮಾಡೋಣ ಎಂದು ತಿಳಿಸಿದರು.

ಜೆಡಿಎಸ್ ಮುಖಂಡರಾದ ಜನತಾ ನಾಗೇಶ್, ,ಮೋಹನ್ ಗೌಡ, ಬಾಲಗೇರಿ ರವಿ, ಪ್ರಸನ್ನ, ವೆಂಕಟೇಶ್, ಕುಮಾರ್ ಗೌಡ(ಗೂಳಿ), ರಾಜಣ್ಣ, ಆಡಿಟರ್ ಕುಮಾರ್, ಕೃಷ್ಣೇಗೌಡ, ಕೊತ್ತಿಪುರ ಗೋವಿಂದರಾಜು, ಮಮತಾ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

12ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ರಾಯರದೊಡ್ಡಿ ವೃತ್ತದಲ್ಲಿ 27ನೇ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಸದಸ್ಯರಾಗಲು ಮಿಸ್ ಕಾಲ್ ನೀಡಿ ಅಭಿಯಾನಕ್ಕೆ ಪಕ್ಷದ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಚಾಲನೆ ನೀಡಿದರು.