ಬಾಲ ಕಾರ್ಮಿಕ ವಿರೋಧಿ ದಿನವನ್ನು ಜಿಲ್ಲೆಯಲ್ಲಿ ಆಯೋಜಿಸಿ ಆ ಮೂಲಕ ಸಮಾಜಕ್ಕೆ ಪರಿಣಾಮಕಾರಿ ಸಂದೇಶ ರವಾನೆಯಾಗುವಂತೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕು
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಜೂನ್ 12 ರಂದು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವ ಸಂಬಂಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಮತ್ತು ಸಹಕಾರದೊಂದಿಗೆ ಕಾರ್ಯೋನ್ಮುಖರಾಗಬೇಕು ಹಾಗೂ ಅಗತ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ ನೀಡಿದರು.ಜೂನ್ 12 ರಂದು ಜಿಲ್ಲಾ ಕೇಂದ್ರದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಸಂಬಂಧ ರೂಪುರೇಷೆಗಳ ಬಗ್ಗೆ ಚರ್ಚಿಸುವ ಸಲುವಾಗಿ ನಡೆದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ ಕಾರ್ಮಿಕ ವಿರೋಧಿ ದಿನವನ್ನು ಜಿಲ್ಲೆಯಲ್ಲಿ ಆಯೋಜಿಸಿ ಆ ಮೂಲಕ ಸಮಾಜಕ್ಕೆ ಪರಿಣಾಮಕಾರಿ ಸಂದೇಶ ರವಾನೆಯಾಗುವಂತೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಬೇಕು ಎಂದರು. ಬೆಳಗ್ಗೆ 9ಕ್ಕೆ ಜಾಥಾ ಕಾರ್ಯಕ್ರಮವು ಪಂಚಗಿರಿ ಬೋಧನಾ ಪ್ರೌಢಶಾಲೆಯ ಆವರಣದಿಂದ ಆರಂಭವಾಗಿ ಬಿ.ಬಿ.ರಸ್ತೆಯ ಮೂಲಕ ಸಭಾ ಕಾರ್ಯಕ್ರಮ ನಡೆಯುವ ಕನ್ನಡ ಭವನಕ್ಕೆ ತಲುಪಲಿದೆ. ಸಭಾ ಕಾರ್ಯಕ್ರಮ ಬೆಳಗ್ಗೆ 11ಕ್ಕೆ ನಿಗದಿತ ಸಮಯಕ್ಕೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಮತ್ತು ಸಂಘಗಳು, ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಆಂದೋಲನ ನಡೆಸುತ್ತಿರುವ ಸಂಸ್ಥೆಗಳ ಕಾರ್ಯಕರ್ತರನ್ನು ಒಳಗೊಳ್ಳುವಂತೆ ಮುಂಜಾಗ್ರತೆ ವಹಿಸಬೇಕು. ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿಜ್ಞಾ ವಿಧಿ ಕಡ್ಡಾಯ: ಜಿಲ್ಲೆಯನ್ನು ಬಾಲ ಕಾರ್ಮಿಕ ಪದ್ಧತಿ ಮುಕ್ತವಾಗಿಸಲು ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಿ ಹೆಚ್ಚಿನ ಗಮನವನ್ನು ಆದ್ಯತೆ ಮೇಲೆ ಹರಿಸಬೇಕು. ಈ ಹಿನ್ನೆಲೆಯಲ್ಲಿ ಜೂನ್ 13 ರಿಂದ 30 ರವರೆಗೆ ರಕ್ಷಣಾ ಅಭಿಯಾನವನ್ನು ಕೈಗೊಳ್ಳಬೇಕು. ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಪ್ರತಿಜ್ಞಾ ವಿಧಿಯನ್ನು ಕಡ್ಡಾಯವಾಗಿ ಸ್ವೀಕರಿಸಬೇಕು. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕರಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.ಸಭೆಯಲ್ಲಿ ಎಎಸ್ ಪಿ ಜಗನ್ನಾಥ ರೈ, ಡಿಹೆಚ್ಓ ಡಾ.ಎಸ್.ಎಸ್. ಮಹೇಶ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬನಾ ಅಜ್ಮಿ, ಡಿಡಿಪಿಐ ವಿ.ರಮೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಮುನಿರತ್ನಮ್ಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಆರ್. ವೆಂಕಟೇಶರೆಡ್ಡಿ, ರೇಷ್ಮೆ ಉಪನಿರ್ದೇಶಕ ಮಾರಪ್ಪ ಬಾಲಪ್ಪ ಬೀರದಹಳ್ಳಿ, ಬೆಸ್ಕಾಂ ಇಇ ರಮೇಶ್ ಕುಮಾರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಮತ್ತಿತರರು ಇದ್ದರು. ಸಿಕೆಬಿ-1
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿದರು