ಸಾರಾಂಶ
ಅಲೆಮಾರಿ ಸಮುದಾಯಗಳಿಗೆ ಶಾಶ್ವತ ನೆಲೆ ಕಲ್ಪಿಸಿ
ಪ್ರಗತಿ ಪರಿಶೀಲನೆ, ಸಮಾಲೋಚನೆ ಸಭೆಯಲ್ಲಿ ನಿಗಮದ ಅಧ್ಯಕ್ಷೆ ಸೂಚನೆಕನ್ನಡಪ್ರಭ ವಾರ್ತೆ ಹೊಸಪೇಟೆ
ಕುಲಕಸಬುಗಳನ್ನೇ ಆಧರಿಸಿ ಜೀವನ ಕಟ್ಟಿಕೊಂಡಿರುವ ಅಲೆಮಾರಿ ಸಮುದಾಯಗಳಿಗೆ ಶಾಶ್ವತ ನೆಲೆ ಕಲ್ಪಿಸಿ ಟೆಂಟ್ ಮುಕ್ತ ಜಿಲ್ಲೆಯನ್ನಾಗಿಲು ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಬೆಂಗಳೂರು ಸಹಯೋಗದಲ್ಲಿ ಅಲೆಮಾರಿ ಸಮುದಾಯಗಳ ಅಹವಾಲು ಸ್ವೀಕಾರ ಮತ್ತು ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಹಾಗೂ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗದವರು ಒಟ್ಟು 40,675 ಜನಸಂಖ್ಯೆ ಇದ್ದು, ಅದರಲ್ಲಿ 1497 ನಿವೇಶನ ರಹಿತ ಹಾಗೂ 1524 ವಸತಿ ರಹಿತ ಕುಟುಂಬಗಳು ವಾಸವಾಗಿವೆ. ಕೂಡಲೇ ಜಿಲ್ಲಾಡಳಿತದ ಸಹಕಾರದೊಂದಿಗೆ ಶೀಘ್ರ ವಸತಿ ಮತ್ತು ನಿವೇಶನ ರಹಿತರಿಗೆ ಸೂಕ್ತ ಸರ್ಕಾರಿ ನಿವೇಶನಗಳನ್ನು ಕಾಯ್ದಿರಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕಾರ್ಯವಾಗಬೇಕಿದೆ ಎಂದರು.
ಶಾಶ್ವತ ಸೂರು ಕಲ್ಪಿಸಿ:ಜಿಲ್ಲೆಯಲ್ಲಿ ಹಕ್ಕಿಪಿಕ್ಕಿ, ಸುಡುಗಾಡು ಸಿದ್ಧರು, ಬುಡ್ಗ ಜಂಗಮ, ಸಿಂಧೋಳ್, ಸಿಳ್ಳೇಕ್ಯಾತ, ಹಂದಿಜೋಗಿ, ಕೊರಮ, ಕೊರಚ, ಮಾಲದಾಸರಿ, ಚನ್ನದಾಸರ್ ಸಮುದಾಯಕ್ಕೆ ಸೇರಿದ ಜನರು ಹೆಚ್ಚಾಗಿ ವಾಸಿಸುತ್ತಿದ್ದು, ಇವರಿಗೆ ಮೂಲಭೂತ ಸೌಕರ್ಯಗಳ ಸಮಸ್ಯೆ, ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕೊರತೆ, ಅರಣ್ಯ ಭೂಮಿಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಹಕ್ಕು ಪತ್ರಗಳ ವಿತರಣೆ ಸೇರಿದಂತೆ ಅನೇಕ ಕೊರತೆಗಳನ್ನು ಮೂರು ದಿನಗಳ ಪ್ರವಾಸದಲ್ಲಿ ಅಧ್ಯಯನ ಮಾಡಲಾಗಿದೆ. ಬಹುತೇಕ ಜನರಿಗೆ ಈಗಲೂ ವೋಟರ್ ಐಡಿ ಕಾರ್ಡ್ ಬಿಟ್ಟರೇ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅನಕ್ಷರಸ್ಥರು ಹೆಚ್ಚಾಗಿರುವ ಈ ಸಮುದಾಯದಲ್ಲಿ ಸರ್ಕಾರಿ ಕಚೇರಿಗೆ ತೆರಳಿ ಸೌಲಭ್ಯಗಳನ್ನು ಪಡೆಯುವಲ್ಲಿ ನಿರಾಸಕ್ತರಾಗಿದ್ದಾರೆ ಎಂಬುದು ಭೇಟಿ ವೇಳೆ ತಿಳಿದು ಬಂದಿದೆ ಎಂದರು.
ಹಡಗಲಿಯ ಕಾಯಕನಗರದಲ್ಲಿ ವಾಸಿಸುವ ಸುಮಾರು 41 ಅಲೆಮಾರಿ ಕುಟುಂಬಗಳು 40 ವರ್ಷಗಳಿಂದ ವಾಸವಾಗಿದ್ದಾರೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸವನ್ನು ತಾಲೂಕಾಡಳಿತ ಮಾಡಿದೆ ಎಂದು ದೂರಿದ್ದಾರೆ. ಹಗರಿಬೊಮ್ಮನಹಳ್ಳಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ಖಾಸಗಿ ನಿವೇಶನದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದಾರೆ. ಇಲ್ಲಿನ ನಿವಾಸಿಗಳು ಹೊಟ್ಟೆಪಾಡಿಗೆ ಯಾರಿಗೂ ಅವಲಂಬಿತರಾಗಿಲ್ಲ. ಭಿಕ್ಷೆ ಬೇಡಿಯಾದರೂ ಜೀವನ ನಡೆಸುತ್ತೇವೆ ಆದರೆ ಶಾಶ್ವತ ನಿವೇಶನ ಕಲ್ಪಿಸಿಕೊಡಿ ಎಂಬುದು ಇಲ್ಲಿನ ಜನರ ಮುಖ್ಯ ಬೇಡಿಕೆಯಾಗಿದೆ ಎಂದರು.ಜಾತಿ ಪ್ರಮಾಣಪತ್ರ ಒದಗಿಸಿ:
ಬಹುತೇಕ ಅಲೆಮಾರಿ ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರಗಳು ದೊರೆತಿಲ್ಲ ಎಂಬುದು ಶೋಚನೀಯ. ಕೂಡಲೇ ತಹಸೀಲ್ದಾರರು ಇಂತಹ ಜನಾಂಗಗಳ ಕುಲಕಸುಬು, ವೃತ್ತಿಗಳನ್ನು ಪರಿಶೀಲಿಸಿ ಪ್ರಮಾಣ ಪತ್ರಗಳನ್ನು ಶೀಘ್ರ ಒದಗಿಸಬೇಕು. ಪ್ರತಿ ತಾಲೂಕಿನಲ್ಲಿ ನಿವೇಶನ ರಹಿತರು, ವಸತಿ ರಹಿತರನ್ನು ಸರ್ವೇ ಮಾಡಿಸಿ ನಿವೇಶನ ನೀಡಲು ಅಗತ್ಯ ಭೂಮಿ ನಿಗದಿಪಡಿಸಿ ಪ್ರತ್ಯೇಕ ಲೇಔಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೇ ನಿಗಮದಿಂದ ಅನುದಾನ ನೀಡಲಾಗುವುದು. ಖಾಸಗಿ ಭೂಮಿಗಳ ಮಾಲೀಕರನ್ನು ಮನವೊಲಿಸಿ ಜಿಲ್ಲಾಡಳಿತದಿಂದಲೇ ಎಸ್‌ಆರ್ ದರದ ಮೇಲೆ ಖರೀದಿಸಿ ಅಲೆಮಾರಿ ಕುಟುಂಬಗಳಿಗೆ ನಿಗದಿಪಡಿಸಬೇಕು. ಉದ್ಯಮಶೀಲತಾ ಯೋಜನೆಯಡಿ ಅಲೆಮಾರಿ ಕುಟುಂಬಗಳು ಅರ್ಜಿಗಳನ್ನು ಸಲ್ಲಿಸಿದಲ್ಲಿ ಯಾವುದೇ ವಿಳಂಬ ಮಾಡದೇ ಬ್ಯಾಂಕ್‌ಗಳು ಆರ್ಥಿಕ ಸಹಾಯಕ್ಕೆ ಮುಂದಾಗಬೇಕು ಎಂದರು.ಅಲೆಮಾರಿ ಕುಟುಂಬಗಳ ಮಕ್ಕಳು ಶಿಕ್ಷಣ ವಂಚಿತರಾಗದಂತೆ ಶಾಲೆಗೆ ತೆರಳಲು ವಿವಿಧ ಇಲಾಖೆಗಳು ಜಾಗೃತಿ ಮೂಡಿಸಬೇಕು. ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಅವಕಾಶ ನೀಡಬೇಕು. ಹೆಚ್ಚಿನ ಬೇಡಿಕೆ ಇದ್ದರೇ ಅಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಕ್ರಮವಹಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೇ ಸಮುದಾಯ ಮುಖ್ಯವಾಹಿನಿ ಬರಲು ಸಾಧ್ಯವಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ವಿಳಂಬ ಮಾಡದಂತೆ ಕೇವಲ ಮೂರು ದಿನಗಳಲ್ಲಿ ಅವರು ವಾಸಿಸಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಮಾಣ ಪತ್ರ ವಿತರಣೆಗೆ ಎಲ್ಲಾ ತಹಸೀಲ್ದಾರರು ಕ್ರಮ ವಹಿಸಬೇಕು. ಅಲೆಮಾರಿ ಸಮುದಾಯಗಳಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದರು.ಇದೇ ವೇಳೆ ವಿವಿಧ ತಾಲೂಕಿನ ಅಲೆಮಾರಿ ಸಮುದಾಯದ ಮುಖಂಡರು ಅಹವಾಲು ಸಲ್ಲಿಸಿದರು. ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಜೆ.ಎಂ. ಅನ್ನದಾನಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ ಮತ್ತಿತರರಿದ್ದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಲೆಮಾರಿ ಸಮುದಾಯದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.