ಸಾರಾಂಶ
ಹಾನಗಲ್ಲ: ಪ್ಲಾಸ್ಟಿಕ್ ಮುಕ್ತ ಭಾರತದ ಕನಸು ನನಸಾಗಿಸಿ, ಪ್ರತಿಯೊಬ್ಬರೂ ಕಾಳಜಿಯಿಂದ ತಮ್ಮ ಪಾತ್ರ ನಿರ್ವಹಿಸಿದರೆ ಪರಿಸರವೂ ಉಳಿಯುತ್ತದೆ, ಭೂಮಿಯೂ ಉಳಿಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅನಿತಾ ತಿಳಿಸಿದರು.
ಸೋಮವಾರ ಹಾನಗಲ್ಲಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಂಯುಕ್ತವಾಗಿ ಆಯೋಜಿಸಿದ ವಿಶ್ವ ಭೂದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ವಿಕೋಪಕ್ಕೆ ದಾರಿ ಮಾಡಿಕೊಡಬಾರದು. ಭೂಮಿ ಹಾಗೂ ಪ್ರಕೃತಿಯನ್ನು ರಕ್ಷಿಸುವ ಮೂಲಕ ಮಾನವ ಜನಾಂಗವನ್ನು ರಕ್ಷಿಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕು ಎಂದರು.ಹಾನಗಲ್ಲಿನ ಅರಣ್ಯ ಇಲಾಖೆ ಸಹಾಯಕ ಅರಣ್ಯಾಧಿಕಾರಿ ಶಿವಾನಂದ ತೋಡ್ಕರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಗಂಧದ ದೊಡ್ಡ ಸಂಪತ್ತುಳ್ಳ ಹಾನಗಲ್ಲ ತಾಲೂಕಿನಲ್ಲೀಗ ಗಂಧವಿಲ್ಲ. ಇಲ್ಲಿನ ಗಂಧದಲ್ಲಿ ಶೇ.೮೦ ರಷ್ಟು ಎಣ್ಣೆಯ ಅಂಶವಿತ್ತು. ಬೆಂಕಿ ಅವಗಡ, ಕಳ್ಳರ ಹಾವಳಿಯಿಂದ ನಾವು ದೊಡ್ಡ ಸಂಪತ್ತನ್ನು ಕಳೆದುಕೊಂಡಿದ್ದೇವೆ. ದೇಶದಲ್ಲಿ ಈಗ ಕೇವಲ ಶೇಕಡಾ ೨೧ರಷ್ಟು ಮಾತ್ರ ಅರಣ್ಯ ಸಂಪತ್ತು ಇದೆ. ಇದು ಶೇ.೩೩ ಕ್ಕೂ ಅಧಿಕವಾದರೆ ಅದು ಸಮತೋಲನವಿದ್ದಂತೆ. ಪ್ಲಾಸ್ಟಿಕ್ ಮುಕ್ತ ಮನೋಸ್ಥಿತಿ ನಿರ್ಮಾಣವಾಗಬೇಕು. ಈ ಭೂಮಿಯಲ್ಲಿ ಮನುಷ್ಯರಾಗಿ ವಾಸಿಸುವ ಅವಕಾಶ ನೀಡಿದ ದೇವರನ್ನು ಸಕಾರಾತ್ಮಕವಾಗಿ ನೆನೆಯೋಣ. ಆದರೆ ಭೂಮಿಯನ್ನು ಕೃತಜ್ಞತೆಯ ಅರಿವಿಲ್ಲದೆ ಮನ ಬಂದಂತೆ ಹಾಳು ಮಾಡಿದರೆ ಅದು ಮನುಕುಲಕ್ಕೆ ಮಾರಕ. ನಾಳೆಗಾಗಿ ಇಂದು ಕಾಡು ಉಳಿಸುವ ಮನಸ್ಸು ಮಾಡೋಣ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಸವಣೂರ, ಮನುಷ್ಯನೇ ತಾನು ಬಾಳಲು ಎಲ್ಲ ಸೌಕರ್ಯ ನೀಡಿದ ಭೂಮಿಗೆ ಮಾರಕವಾಗಿದ್ದಾನೆ. ಪ್ರಕೃತಿ ಉಳಿಸದಿದ್ದರೆ ಮನುಷ್ಯನೂ ಉಳಿಯಲಾರ. ದುಡ್ಡು ಗಳಿಸಬಹುದು, ಭೂಮಿ ಹೆಚ್ಚಾಗಲು ಸಾಧ್ಯವಿಲ್ಲ. ಎಲ್ಲ ಪ್ರಾಣಿಗಳಿಗೂ ಭೂಮಿಯೇ ಆಧಾರ. ಅದರೆ ಭೂಮಿ ಪ್ರಕೃತಿಯನ್ನು ಹಾಳು ಮಾಡುತ್ತಿರುವವನು ಮನುಷ್ಯ ಮಾತ್ರ. ಈಗಲಾದರೂ ಎಚ್ಚತ್ತುಕೊಳ್ಳೋಣ ಎಂದರು.ಹಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ. ವೆಂಕಟಪ್ಪ, ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್.ಕೆ. ಜನಾರ್ಧನ, ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ಸಹಾಯಕ ಸರಕಾರಿ ಅಭಿಯೋಜಕ ಜಿ.ಎಂ.ರಾಜಶೇಖರ ವೇದಿಕೆಯಲ್ಲಿದ್ದರು. ನ್ಯಾಯವಾದಿ ವಿನಾಯಕ ಕುರುಬರ ಕಾರ್ಯಕ್ರಮ ನಿರೂಪಿಸಿದರು.