ಸಾರಾಂಶ
ಹಾವೇರಿ: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನದ ನಿಮಿತ್ತ ನಗರದ ಹೊರವಲಯದಲ್ಲಿರುವ ಬಿಸಿಎಂ ಇಲಾಖೆಯ ವೃತ್ತಿಪರ ಮೆಟ್ರಿಕ್ ನಂತರದ ವಸತಿನಿಲಯದಲ್ಲಿ ಎಸ್‌ಎಫ್‌ಐ, ಡಿವೈಎಫ್‌ಐ ಆಶ್ರಯದಲ್ಲಿ ಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ನಗುತ್ತಲೇ ಪ್ರಾಣಾರ್ಪಣೆಗೈದು ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಕನಸುಗಳನ್ನು ನನಸು ಮಾಡಲು ಯುವಜನತೆ ಮುಂದಾಗಬೇಕೆಂದರು. ಭಗತ್ ಸಿಂಗ್ ಒಬ್ಬ ಉತ್ತಮ ಅಧ್ಯಯನಶೀಲರಾಗಿದ್ದರು. ನೇಣು ಕಂಬಕ್ಕೆ ಹೇರುವ ಕೊನೆ ಕ್ಷಣದವರೆಗೂ ಅಧ್ಯಯನ ಮಾಡಿದರು ಎಂದರು.ಕ್ರಾಂತಿ ಎಂದರೆ ಬಂದೂಕು ಬಾಂಬ್‌ಗಳಿಂದ ಹತ್ಯೆ ಮಾಡುವುದಲ್ಲ ಎಂದು ನಂಬಿದ್ದರು. ಭಗತ್ ಅವರು ತಾಯಿಯೊಂದಿಗೆ ಸಂಭಾಷಣೆ ಮಾಡುವ ಸಂದರ್ಭದಲ್ಲಿ ಬಿಳಿಯ ಸಾಹೇಬರ ಬದಲಾಗಿ ಕರಿಯ ಸಾಹೇಬರು ಬರಬಹುದು ಭಗತ್ ಸಿಂಗ್ ಅವರ ಆತಂಕ ಪ್ರಸ್ತುತವಾಗಿದೆ ಎಂದರು.ಡಿವೈಎಫ್‌ಐ ಮುಖಂಡರಾದ ನಾರಾಯಣ ಕಾಳೆ ಮಾತನಾಡಿ, ಭಗತ್ ಸಿಂಗ್ ಅವರನ್ನು ಸರಿಯಾಗಿ ಅಧ್ಯಯನ ಮಾಡಿ ಆದರ್ಶವಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಶಿಕ್ಷಣ, ಉದ್ಯೋಗ, ದೇಶದ ಸೌಹಾರ್ದ ಐಕ್ಯತೆಗಾಗಿ ಹೋರಾಡಬೇಕು ಎಂದರು.ಅದೇ ರೀತಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮೈಲಾರ ಮಹಾದೇವಪ್ಪ, ತಿರುಕಪ್ಪ ಮಡಿವಾಳರ, ಮೆಣಸಿನಾಳ ತಿಮ್ಮನಗೌಡರು ಅವರನ್ನು ಸ್ಮರಿಸಬೇಕು. ಉದ್ಯೋಗ ಜೀವನಕ್ಕಾಗಿ ಎಷ್ಟು ಮುಖ್ಯ ಅಷ್ಟೇ ದೇಶಕ್ಕಾಗಿ ಕೂಡ ದುಡಿಯಬೇಕು. ನಿರಂತರ ಅಭ್ಯಾಸದಿಂದ ಸಾಧನೆ ಮಾಡಿ ಆಗ ಮಾತ್ರ ಹುತಾತ್ಮರ ತ್ಯಾಗ ಸಾರ್ಥಕ ಎಂದರು.ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ನಿಲಯ ಪಾಲಕರಾದ ಪರಮೇಶ್ವರ ತಿಪ್ಪಕೊಂಡರ, ಅಧ್ಯಕ್ಷತೆ ವಹಿಸಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿದರು. ಸುನೀಲ್ ಕುಮಾರ್ ಎಲ್. ಇದ್ದರು. ನವೀನ ಮಲಗಣ್ಣನವರ, ವೀರನಗೌಡ ಪಾಟೀಲ, ಸಂಜೀವ ಬನ್ನಿಮಟ್ಟಿ, ರಾಕೇಶ ಗುರಣ್ಣನವರ, ಶಿವರಾಜ ಬೇಲಿ, ಅಪ್ಪು ಆರ್., ಅನ್ವಿಕಾ ಆರ್.ಬಿ., ಭುವನ್, ರತನ್ ಪಿ.ಟಿ. ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ವಕೀಲರ ಸಂಘದ ಅಧ್ಯಕ್ಷರಾಗಿ ಲಕ್ಕಣ್ಣವರ್ ಆಯ್ಕೆ
ಶಿಗ್ಗಾಂವಿ: ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಬಿ. ಲಕ್ಕಣ್ಣವರ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಎಸ್.ಜಿ. ಟೋಪಣ್ಣವರ್, ಕಾರ್ಯದರ್ಶಿಯಾಗಿ ವಿವೇಕ ಎಂ. ರಾಮಗೇರಿ, ಸಹ ಕಾರ್ಯದರ್ಶಿಯಾಗಿ ಸಿ.ಬಿ. ವಾಲ್ಮೀಕಿ, ಖಜಾಂಚಿಯಾಗಿ ಎಂ.ಎಲ್. ಕಳಸ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಜಿ. ಬಿಂದ್ಲಿ ಘೋಷಣೆಯನ್ನು ಮಾಡಿದರು.ಮಾ. ೨೨ರಂದು ಜರುಗಿದ ಚುನಾವಣೆಯಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಸಿ.ಬಿ. ಪಾಟೀಲ್, ಎ.ಎ. ಗಂಜಣ್ಣವರ್, ಸಿ.ಎಫ್. ಅಂಗಡಿ, ಎಸ್.ಎಂ. ಗಾಣಿಗೇರ್, ಪಿ.ಪಿ. ಹೊಂಡದಕಟ್ಟಿ, ಪಿ.ಎಂ. ಗೋಂದ್ಕರ್, ಮಹಿಳಾ ಪ್ರತಿನಿಧಿಯಾಗಿ ವಿ.ಪಿ. ಬಾಗುರು ಆಯ್ಕೆಯಾಗಿದ್ದಾರೆ ಎಂದರು.ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ಬಿ. ಲಕ್ಕಣ್ಣವರ ಮಾತನಾಡಿ, ೨೦೨೫ರಿಂದ ೨೦೨೮ರ ಅವಧಿಗೆ ಚುನಾವಣೆ ನಡೆದಿದ್ದು, ಜಾತಿ, ಮತ, ಧರ್ಮ ಮತ್ತು ಗುಂಪುಗಾರಿಕೆಯನ್ನು ಮೀರಿ ಸಾಮಾಜಿಕ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಂಡು ನಡೆದಿರುವ ನಿಷ್ಪಕ್ಷಪಾತ ಚುನಾವಣೆ ಆಗಿದೆ ಎಂದರು.
ನೂತನ ಕಾರ್ಯದರ್ಶಿ ವಿವೇಕ.ಎಂ. ರಾಮಗೇರಿ ಮಾತನಾಡಿ, ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯವಾದಿಗಳ ಸಂಘದ ಸಂಕೀರ್ಣದಲ್ಲಿ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಯುವ ವಕೀಲರಿಗೆ ಬೇಕಾಗಿರುವ ಅವಶ್ಯಕ ತರಬೇತಿ ನೀಡುವ ಕಾರ್ಯಕ್ರಮಗಳು ಸದ್ಯದಲ್ಲಿ ಚಾಲನೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ ಹಿರಿಯ ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಇದ್ದರು.