ಶೋಷಿತರ ಜಾಗೃತಿ ಸಮಾವೇಶ ಯಶಸ್ವಿಗೊಳಿಸಿ

| Published : Jan 24 2024, 02:00 AM IST

ಶೋಷಿತರ ಜಾಗೃತಿ ಸಮಾವೇಶ ಯಶಸ್ವಿಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವರಹಿಪ್ಪರಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಎಸ್.ಎಂ.ಪಾಟೀಲ(ಗಣಿಹಾರ) ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಸಂವಿಧಾನ ಅಪಾಯದಲ್ಲಿದೆ. ಉಳ್ಳವರು ಶೋಷಿತರ ಮೇಲೆ ನಿರಂತರ ದಬ್ಬಾಳಿಕೆ ನಡೆಸಿ ಅವರ ಧ್ವನಿ ಹತ್ತಿಕ್ಕುತಿದ್ದಾರೆ. ಎಲ್ಲ ಶೋಷಿತ ಸಮುದಾಯಗಳ ಒಗ್ಗೂಡಿ ತಮ್ಮ ಹಕ್ಕು ಪಡೆಯಬೇಕಿದೆ. ಆದ ಕಾರಣ ಶೋಷಿತರ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ವಕ್ತಾರ ಎಸ್.ಎಂ.ಪಾಟೀಲ(ಗಣಿಹಾರ) ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯದ ಪರ ಹಲವು ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿಗೊಳಿಸಿವೆ. ಆದರೆ, ಕೇಂದ್ರ ಸರ್ಕಾರ ಶೋಷಿತರ ಪರವಾಗಿ ನಿಲ್ಲದಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು ಹಾಗೂ ರಾಜ್ಯ ಸರ್ಕಾರ ಹೆಚ್. ಕಾಂತರಾಜ್ ವರದಿಯನ್ನು ಕೂಡಲೇ ಸ್ವೀಕರಿಸಿ ಯಥಾವತ್ತಾಗಿ ಮಂಡಿಸಲು ಒತ್ತಡ ಹೇರಬೇಕಾಗಿದೆ. ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಸೋಮನಾಥ ಕಳ್ಳಿಮನಿ ಮಾತನಾಡಿ, ಜ.28 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶ ದೇಶದ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಶೋಷಿತ ಹಿಂದುಳಿದವರ ಬದುಕು ಹಸನಾಗಬೇಕಾದರೆ ಎಚ್.ಕಾಂತರಾಜ್ ಆಯೋಗದ ವರದಿ ಅನುಷ್ಠಾನ ಅವಶ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಬೆಂಬಲಿಸಬೇಕಿದೆ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜಕ್ಕಪ್ಪ ಅಡವಿ, ನಾಗರಾಜ ಲಂಬು, ರಾಜಶ್ರೀ ಯರನಾಳ, ಗೌರಮ್ಮ ಮುತ್ತತ್ತಿ, ರಾಜೇಶ್ ತೊರವಿ, ದೇವಾನಂದ ಲಚ್ಚಣ ಪ್ರಭುಗೌಡ ಪಾಟೀಲ, ಪ್ರಕಾಶ್ ಗುಡಿಮನಿ, ರಾಜು ಸಿಂದಗೇರಿ, ಮಹೇಶ್ ಮುರಾಳ, ಬಸವರಾಜ ಇಂಗಳಗಿ, ಶಿವು ವಾಲಿಕಾರ, ಹುಯೋಗಿ ತಳ್ಳೋಳ್ಳಿ, ಬೀರು ಹಳ್ಳಿ, ಶರಣು ನಾಟಿಕಾರ, ರಾಘವೇಂದ್ರ ಪಡಗಾನೂರ, ರಾಘವೇಂದ್ರ ಗುಡಿಮನಿ, ಇಕ್ಬಾಲ್ ಬಿಜಾಪುರ, ರಾವುತ ಮಾಸ್ತರ ತಳಕೇರಿ, ಅಪ್ಪು ಮುಲ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.