ಹೊಸಪೇಟೆ ಸಾಧನಾ ಸಮಾವೇಶದ ಯಶಸ್ವಿಗೊಳಿಸಿ: ಮಯೂರ್ ಜಯಕುಮಾರ

| Published : May 18 2025, 01:21 AM IST

ಸಾರಾಂಶ

ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಮೇ 20ರಂದು ಹೊಸಪೇಟೆಯಲ್ಲಿ ನಡೆಯಲಿದ್ದು, ಎಲ್ಲಾ ಸಚಿವರು, ಶಾಸಕರು, ಜನ ಪ್ರತಿನಿಧಿಗಳು ಫಲಾನುಭವಿಗಳನ್ನು ಕರೆ ತಂದು, ಸಮಾವೇಶ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಮಯೂರ್ ಜಯಕುಮಾರ ಕರೆ ನೀಡಿದರು.

ಮೇ 20ರಂದು ಪಕ್ಷದ ಸಮಾವೇಶ । ಎಲ್ಲ ಭಾಗವಹಿಸಲು ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಮೇ 20ರಂದು ಹೊಸಪೇಟೆಯಲ್ಲಿ ನಡೆಯಲಿದ್ದು, ಎಲ್ಲಾ ಸಚಿವರು, ಶಾಸಕರು, ಜನ ಪ್ರತಿನಿಧಿಗಳು ಫಲಾನುಭವಿಗಳನ್ನು ಕರೆ ತಂದು, ಸಮಾವೇಶ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಮಯೂರ್ ಜಯಕುಮಾರ ಕರೆ ನೀಡಿದರು.

ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಸಭೆಯಲ್ಲಿ ಮಾತನಾಡಿ, ಸರ್ಕಾರದ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ್ದೇ ಆಗಿರುವುದರಿಂದ ಪಕ್ಷದ ಪ್ರತಿಯೊಬ್ಬರೂ ಸಮಾವೇಶದ ಯಶಸ್ಸಿಗೆ ಸಹಕರಿಸಬೇಕು ಎಂದರು.

ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಸರ್ಕಾರ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರವೆಂಬ ಹೆಗ್ಗಳಿಕೆ ಇದೆ. ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರೂ ಸತತ ಪ್ರಯತ್ನ ಮಾಡಿ ಘೋಷಿಸಿದಂತೆ, ಸರ್ಕಾರ ಮಾಡಿದ 30 ದಿನದೊಳಗೆ ಜಾರಿಗೊಳಿಸಿದ್ದಾರೆ. ಪ್ರಸ್ತುತ ಕೋಟ್ಯಂತರ ಜನರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸಬೇಕು ಎಂದು ತಿಳಿಸಿದರು.

ಸಂವಿಧಾನ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಕರೆ ನೀಡಿರುವ ಸಂವಿಧಾನ್ ಬಚಾವೋ ಮತ್ತು ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ಧ ನಾವು ಇನ್ನೂ ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗಿದೆ. ನೀವು ಬರೀ ಜಿಲ್ಲೆಗಳಲ್ಲಿ ಮಾಡಿದ್ದೀರಿ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಹೋರಾಟಗಳನ್ನು ರೂಪಿಸುವ ಕೆಲಸ ನಿಮ್ಮೆಲ್ಲದಿಂದಲೂ ಆಗಬೇಕು ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 6.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 4.5 ಕೋಟಿ ಜನ ಒಂದಲ್ಲ ಒಂದು ರೀತಿ ಫಲಾನುಭವಿಗಳಾಗಿದ್ದಾರೆ. ಇದು ಬರೀ ಕಾಂಗ್ರೆಸ್ಸಷ್ಟೇ ಅಲ್ಲ. ಇದರಲ್ಲಿ ಸುಮಾರು ಶೇ.40 ಬಿಜೆಪಿ ಜನ ಲಾಭ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯನವರ 2 ವರ್ಷದ ಅವಧಿ ಸುವರ್ಣ ಕಾಲವಾಗಿದೆ ಎಂದರು.

ರಾಜ್ಯದಲ್ಲಿ ಬಡತನ ನಿವಾರಣೆಗೆ ಏನೆಲ್ಲಾ ಸಾಧ್ಯವಿದೆಯೋ ಅದನ್ನು ಸರ್ಕಾರ ಮಾಡುತ್ತಿದೆ. ಬರುವಂತಹ ಪಾಲಿಕೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಪಡೆಯಲು ಸಂಘಟಿಸಬೇಕು ಎಂದರು.

ಕಾಂಗ್ರೆಸ್ ಪಕ್ಷವು 2028ರಲ್ಲೂ ನಾವೇ ಬರಬೇಕು. ಇದಕ್ಕೆ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ರಾಷ್ಟ್ರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಿ, ದ್ವೇಷ ರಾಜಕಾರಣ ಮಾಡುತ್ತಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಾಮನೂರು ಟಿ.ಬಸವರಾಜ, ವಡ್ನಾಳ್ ಜಗದೀಶ, ಮುದೇಗೌಡ್ರು ಗಿರೀಶ, ಅನಿತಾ ಬಾಯಿ, ಎಸ್.ಮಲ್ಲಿಕಾರ್ಜುನ, ಡಾ.ರಾಘವೇಂದ್ರ, ಬ್ಲಾಕ್ ಅಧ್ಯಕ್ಷರಾದ ಷಂಷೀರ್ ಅಹಮದ್, ಬಿ.ಜಿ.ನಾಗರಾಜ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.