ಕುಶಾನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕನ್ನಡ ಭಾಷೆಯ ಸಾಹಿತ್ಯ, ಸಂಗೀತ ಹಾಗೂ ಕಲೆಯನ್ನು ಕನ್ನಡ ನೆಲದಲ್ಲಿನ ಪ್ರತಿಯೊಬ್ಬರು ತಮ್ಮ ಉಸಿರಲ್ಲಿ ಉಸಿರಾಗಿಸಿ ಅನುಸರಿಸುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂದು ತುಮಕೂರು ಜಿಲ್ಲೆಯ ಹಿರಿಯ ಸಾಹಿತಿ, ಗಮಕ ವಿದ್ವಾನ್ ಎಸ್.ಜಿ.ಸಿದ್ದರಾಮಯ್ಯ ಕರೆ ನೀಡಿದರು.ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,ನಮ್ಮೆಲ್ಲರ ಉಸಿರಲ್ಲಿ ಹಾಗೂ ಮನದಲ್ಲಿ ಕನ್ನಡ ಇರುವವರೆಗೂ ಕನ್ನಡ ಅಳಿಯಲು ಸಾಧ್ಯವಿಲ್ಲ. ಕನ್ನಡ ಹೃದಯದ ಹಾಗೂ ಮನಸ್ಸಿನ ಭಾಷೆಯಾಗಬೇಕು. ಜಗತ್ತಿನಲ್ಲಿನ ಅನೇಕ ಭಾಷೆಗಳ ಪೈಕಿ ಕನ್ನಡದಷ್ಟು ಸುಂದರವಾದ ಭಾಷೆ ಮತ್ತೊಂದಿಲ್ಲ. ವಿಶ್ವ ಲಿಪಿಗಳ ರಾಣಿಯಾದ ಕನ್ನಡ ದಲ್ಲಿ ರಚನೆಯಾದ ಶ್ರೇಷ್ಠ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಪ್ರಪಂಚದಾದ್ಯಂತ ಅನೇಕ ಭಾಷೆಗಳಲ್ಲಿ 177 ಭಾರಿ ಮುದ್ರಣಗೊಂಡ ಬಗೆಯನ್ನು ಸಿದ್ದರಾಮಯ್ಯ ಸ್ಮರಿಸಿದರು.
ದ.ರಾ.ಬೇಂದ್ರೆ, ನಾ.ಕಸ್ತೂರಿ, ಬಿ.ಎಂ.ಶ್ರೀಕಂಠಯ್ಯ, ಡಿ.ವಿ. ಗುಂಡಪ್ಪ ಮೊದಲಾದವರು ಅನ್ಯ ಭಾಷಿಗರಾದರೂ ಕೂಡ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ಪ್ರಾತಸ್ಮರಣೀಯರು ಎಂದು ಸಿದ್ದರಾಮಯ್ಯ ಹೇಳಿದರು.ಕನ್ನಡ ನಾಡಿನ ಕಾವೇರಿಯ ಮಡಿಲು ಕೊಡಗು ಮೂಲಕ ದೇಶಕ್ಕೆ ಅನೇಕ ಶೂರರು ಹಾಗೂ ವೀರರನ್ನು ಕರುಣಿಸಿದೆ. ಅಂತರಾಷ್ಟ್ರೀಯ ಮಟ್ಟಕ್ಕೆ ಕೊಡಗಿನ ಕಾಫಿಯನ್ನು ಪರಿಚಯಿಸಿದ ಸಾಕಮ್ಮ, ಸಾಹಿತ್ಯವನ್ನು ಪಸರಿಸಿದ ಗೌರಮ್ಮ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜ್ಞಾನಪೀಠ ಪ್ರಶಸ್ತಿಯ ಗರಿಗೆ ಸಾಹಿತ್ಯ ಅಭಿರುಚಿ ಉಣಬಡಿಸಿದ ಕೊಡಗು ಜಿಲ್ಲೆಯ ಬಗ್ಗೆ ಸಿದ್ದರಾಮಯ್ಯ ವರ್ಣಿಸಿದರು.
ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ ಮಾತನಾಡಿ, ಕನ್ನಡ ನಮ್ಮ ಬದುಕಿನ ಭಾಷೆಯಾಗಬೇಕು. ಹಾಗೂ ಈ ನೆಲಮೂಲ ಸಂಸ್ಕ್ರತಿಯಾಗಬೇಕೆಂದು ಹೇಳಿದ ಅವರು,ಕನ್ನಡದ ಕವಿಗಳು ಹಾಗೂ ಸಾಹಿತಿಗಳ ಕುರಿತಾದ ಪ್ರಶ್ನೆ ಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಗಳನ್ನು ನೀಡಿದರು.
ಜನಪದ ಕಲಾವಿದೆ ಪ್ರೇಮ ಕುಮಾರಸ್ವಾಮಿ ಕುವೆಂಪು ರಚಿತ ಗೀತೆಗಳನ್ನು ಹಾಡಿದರು.ದೂರದರ್ಶನದ ಕಲಾವಿದ ಈಶ್ವರಯ್ಯ ಅವರು ಪ್ರಾಣಿಗಳ ಕುರಿತಾಗಿ ನಡೆಸಿಕೊಟ್ಟ ಮಿಮಿಕ್ರಿ ವಿದ್ಯಾರ್ಥಿಗಳ ಮನಸೂರೆಗೊಂಡಿತು.
ಕಾಲೇಜಿನ ಪ್ರಾಂಶುಪಾಲ ಡಾ.ಪರಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ಸತೀಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಸೀನಪ್ಪ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥಡಾ.ರಂಗನಾಥ್, ಉಪನ್ಯಾಸಕರಾದ ಪೃಥ್ವಿರಾಜ್, ವೆಂಕಟೇಶ್, ಪ್ರಭಾರ ಕುಲಸಚಿವರಾದ ಹೆಚ್.ಎ.ರೂಪ ಇದ್ದರು.
ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ವಿದ್ಯಾರ್ಥಿನಿ ಸಹನಾ ಹಾಗೂ ದಿವ್ಯಶ್ರೀ ನಿರೂಪಿಸಿದರು.ದೀಕ್ಷಾ ಹಾಗೂ ಮಾನಸ ನಾಡಗೀತೆ ಹಾಡಿದರು. ಆಶಾ ಸ್ವಾಗತಿಸಿದರು. ಅಭಿಲಾಶ್ ವಂದಿಸಿದರು.