ಮಾಧ್ಯಮರಂಗದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ

| Published : May 20 2025, 01:31 AM IST

ಮಾಧ್ಯಮರಂಗದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಧ್ಯಮರಂಗ ಇಂದು ಬಹಳ ವಿಸ್ತಾರವಾಗಿ ಹರಡಿಕೊಂಡಿದೆ. ಇದರಲ್ಲಿರುವ ವಿಫುಲ ಅವಕಾಶಗಳನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಸಂತ ಟಿ. ಡಿ. ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಮಾಧ್ಯಮರಂಗ ಇಂದು ಬಹಳ ವಿಸ್ತಾರವಾಗಿ ಹರಡಿಕೊಂಡಿದೆ. ಇದರಲ್ಲಿರುವ ವಿಫುಲ ಅವಕಾಶಗಳನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಸಂತ ಟಿ. ಡಿ. ತಿಳಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಮಾಧ್ಯಮ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಂದು ಪತ್ರಿಕೆ, ಟಿವಿಗಳಿಗೆ ಸೀಮಿತವಾಗಿಲ್ಲ. ಡಿಜಿಟಲ್ ಯುಗ ನಮ್ಮನ್ನು ಆವರಿಸಿಕೊಂಡಿದೆ. ಯುವಜನರು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಮಾಧ್ಯಮರಂಗವನ್ನು ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಾಧ್ಯಮ ರಂಗದ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾಧ್ಯಮರಂಗದಲ್ಲಿ ಉದ್ಯೋಗ ಪಡೆಯುವವರಿಗೆ ಜೀವನೋಪಾಯವಷ್ಟೇ ಮುಖ್ಯವಾಗುವುದಿಲ್ಲ. ಸಮಾಜದ ಬದಲಾವಣೆಯಲ್ಲಿ ಪಾತ್ರವಹಿಸಿದ ತೃಪ್ತಿ ಹಾಗೂ ಸಾಮಾಜಿಕ ಮನ್ನಣೆ ಕೂಡ ಇರುತ್ತದೆ ಎಂದರು. ಸಾಂಪ್ರದಾಯಿಕ ಮಾಧ್ಯಮಗಳ ಜಾಗವನ್ನು ಡಿಜಿಟಲ್ ಮಾಧ್ಯಮಗಳು ಆಕ್ರಮಿಸಿಕೊಂಡರೂ ಮಾಧ್ಯಮಗಳ ಮಹತ್ವ ಕಡಿಮೆಯಾಗಿಲ್ಲ. ಅವಕಾಶಗಳು ಹತ್ತಾರು ಪಟ್ಟು ಹೆಚ್ಚಾಗಿವೆ. ಅವನ್ನು ಬಳಸಿಕೊಳ್ಳುವ ಕೌಶಲವನ್ನು ರೂಢಿಸಿಕೊಳ್ಳುವುದು ಮುಖ್ಯ, ಜಾಹೀರಾತು, ಗ್ರಾಫಿಕ್ಸ್ ಮತ್ತು ಅನಿಮೇಶನ್, ಸಿನಿಮಾ, ಭಾಷಾಂತರ, ತಾಂತ್ರಿಕ ಬರವಣಿಗೆ ಕ್ಷೇತ್ರಗಳಲ್ಲಿ ಅಪಾರ ಅವಕಶಗಳಿವೆ ಎಂದರು. ಕಂಪ್ಯೂಟರ್ ಜ್ಞಾನ, ಉತ್ತಮ ಸಂವಹನ ಕೌಶಲ, ಭಾಷೆಯ ಮೇಲಿನ ಹಿಡಿತ ಇವುಗಳ ಬಗ್ಗೆ ವಿದ್ಯಾರ್ಥಿಗಳು ಕಾಳಜಿ ವಹಿಸಬೇಕು. ಮಾಧ್ಯಮರಂಗದ ಯಾವುದೇ ಭಾಗವನ್ನು ಪ್ರವೇಶಿಸಿದರೂ ಯಶಸ್ಸು ಕಾಣಬಹುದು. ಬದಲಾಗುತ್ತಿರುವ ಮಾಧ್ಯಮರಂಗ ಬಯಸುವ ಕೌಶಲಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಉಪನ್ಯಾಸಕ ಡಾ. ಪೃಥ್ವಿರಾಜ ಟಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿಯನ್ನು ಪರಿಚಯಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಬಿ. ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕಿ ಡಾ. ಅನಸೂಯ ಕೆ. ವಿ. ವಂದಿಸಿದರು. ಉಪನ್ಯಾಸಕರಾದ ವಿನಯ್ ಕುಮಾರ್ ಎಸ್.ಎಸ್., ಡಾ. ಗಿರಿಜಮ್ಮ ಜಿ. ಉಪಸ್ಥಿತರಿದ್ದರು.