ಮೈಸೂರು ಪಾದಯಾತ್ರೆ ಯಶಸ್ವಿಗೊಳಿಸಿ: ರೂಪಾಲಿ ನಾಯ್ಕ

| Published : Jul 31 2024, 01:13 AM IST

ಮೈಸೂರು ಪಾದಯಾತ್ರೆ ಯಶಸ್ವಿಗೊಳಿಸಿ: ರೂಪಾಲಿ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಆ. 3ರಂದು ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಈ ಪಾದಯಾತ್ರೆ ಅತಿ ಮಹತ್ವದ್ದಾಗಿದೆ ಹಾಗೂ ದಲಿತರಿಗೆ ಸಿಗಬೇಕಾದ ಸೌಲಭ್ಯ, ಅನುದಾನವನ್ನು ದೋಚಿದ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ಕಾರವಾರ: ದಲಿತರಿಗೆ ಸಿಗಬೇಕಾದ ಸೌಲಭ್ಯವನ್ನು ಲೂಟಿ ಮಾಡಿದ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಮೂಡಿಸಲು ಬೆಂಗಳೂರಿನಿಂದ ಮೈಸೂರಿಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮೈಸೂರು ಚಲೋ ಪಾದಯಾತ್ರೆಯ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.ಆ. 3ರಂದು ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಈ ಪಾದಯಾತ್ರೆ ಅತಿ ಮಹತ್ವದ್ದಾಗಿದೆ ಹಾಗೂ ದಲಿತರಿಗೆ ಸಿಗಬೇಕಾದ ಸೌಲಭ್ಯ, ಅನುದಾನವನ್ನು ದೋಚಿದ ಕಾಂಗ್ರೆಸ್ ವಿರುದ್ಧ ಜನಜಾಗೃತಿ ಮೂಡಿಸಬೇಕಾಗಿದೆ.

ಕಾಂಗ್ರೆಸ್‌ ಸರ್ಕಾರ ಮಾಡಿರುವ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಜನರಿಗೆ ಮಾಡಿದ ದ್ರೋಹವನ್ನು ತೆರೆದಿಡಬೇಕಾಗಿದೆ. ವಾಲ್ಮೀಕಿ ನಿಗಮದ ಹಗರಣದಿಂದ ಅಧಿಕಾರಿಗೆ ಕಿರುಕುಳ ನೀಡಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ಇಂತಹ ದುರಾಡಳಿತ ರಾಜ್ಯದಲ್ಲಿ ನಡೆಯುತ್ತಿದೆ. ಹಗರಣಗಳನ್ನು ಮಾಡಿ ಬಡಜನರ ಹಣವನ್ನು ಲೂಟಿ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಿಂದ ಎಲ್ಲರೂ ಬೆಂಗಳೂರಿನಲ್ಲಿ ಆ. 4ರಂದು ಹಾಜರಿರಬೇಕು. ಅಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದರು. ಪಾದಯಾತ್ರೆಯ ಒಂದನೆ ದಿನದಿಂದ ಕೊನೆಯವರೆಗೂ ಮಂಡಲದಿಂದ ಕನಿಷ್ಠ 10 ಜನರು ಪಾಲ್ಗೊಳ್ಳಬೇಕು. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾದಯಾತ್ರೆಯಲ್ಲಿ ಇರಬೇಕು. ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ನಾಯಕತ್ವವನ್ನು ಬೆಳೆಸಲು ಈ ಪಾದಯಾತ್ರೆ ಒಳ್ಳೆಯ ಅವಕಾಶವಾಗಿದೆ. ಬೂತ್‌ ಕಮಿಟಿ ಕಾರ್ಯ ಪ್ರವೃತ್ತಿಯನ್ನು ಮಂಡಲ ಅಧ್ಯಕ್ಷರು ಗಮನಿಸಬೇಕು. ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.ಪ್ರಸ್ತುತ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ನಿಗಮದ ₹187 ಕೋಟಿ ಹಗರಣ, ಹೀಗೆ ಹಲವಾರು ಹಗರಣಗಳ ಸರಮಾಲೆಯನ್ನು ನೀಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯವರು ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಿದೆ ಎಂದು ಹೇಳಿ, ಪಾದಯಾತ್ರೆಯ ರೂಪುರೇಷೆಗಳನ್ನು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಎಲ್ಲ ಭಾಗ್ಯಗಳು ಸ್ಥಗಿತಗೊಂಡಿವೆ ಎಂದರು. ಪಕ್ಷದ ಪ್ರಮುಖರಾದ ಸುನಿಲ್ ಸೋನಿ ಪಕ್ಷ ಸಂಘಟನೆ ಕುರಿತು ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರ ಅಧ್ಯಕ್ಷ ನಾಗೇಶ್ ಕುರ್ಡೇಕರ್, ಯುವ ಮುಖಂಡ ಪರ್ಭತ್ ನಾಯ್ಕ್, ನಗರ ಪ್ರಧಾನ ಕಾರ್ಯದರ್ಶಿ, ದೇವಿದಾಸ್ ಕಂತ್ರಿಕರ್, ಅಶೋಕ ಗೌಡ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್, ಸೂರಜ್ ದೇಸಾಯಿ, ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ, ಅಶೋಕ್ ಗೌಡ ಸ್ವಾಗತಿಸಿದರು.