ಸಾರಾಂಶ
ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು.
ಗ್ರಾಮಸಭೆಯಲ್ಲಿ ಬಸರಿಹಾಳ ಪಿಡಿಒಕನ್ನಡಪ್ರಭ ವಾರ್ತೆ ಕನಕಗಿರಿ
ನರೇಗಾ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಪಿಡಿಒ ಬಸವರಾಜ ಸಂಕನಾಳ ಕರೆ ನೀಡಿದರು.ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿನ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
ಗ್ರಾಮದ ಜನರು ನರೇಗಾ ಯೋಜನೆಯ ಮೂಲಕ ಹಲವಾರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಬಹುದು. ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಗ್ರಾಮದ ಗ್ರಾಮೀಣಾಭಿವೃದ್ಧಿ ಕನಸನ್ನು ನನಸಾಗಿಸಬೇಕು ಎಂದರು.ಜೊತೆಗೆ ನರೇಗಾ ಕಾಯಕ ಬಂಧುಗಳು ಕೂಲಿಕಾರರಿಗೆ 100 ದಿನಗಳ ಕೆಲಸ ಕೊಡಿಸುವಲ್ಲಿ ಶ್ರಮಿಸಬೇಕು. ಕಾಲ ಕಾಲಕ್ಕೆ ನಮೂನೆ-06 ಅನ್ನು ಗ್ರಾಮ ಪಂಚಾಯಿತಿಗೆ ತುಂಬಿ ಕೊಡಬೇಕು. ಬದು ನಿರ್ಮಾಣ, ಕೃಷಿ ಹೊಂಡ, ದನದ ದೊಡ್ಡಿ, ಮೇಕೆ ಶೆಡ್, ಹಂದಿ ಶೆಡ್, ಕೋಳಿ ಶೆಡ್ ಸೇರಿದಂತೆ ತೋಟಗಾರಿಕೆ ಬೆಳೆಗಳು, ಕೃಷಿ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಯಿಂದ ಕಾಮಗಾರಿ ಮಾಡಲು ಅವಕಾಶವಿದೆ. ಇದನ್ನು ಕೂಲಿಕಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಂತರ ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಮಹಾಂತೇಶ್, ಕನಕಪ್ಪ ಹಾಗೂ ರಿಯಾಜ್ ಮಾತನಾಡಿ, ತಮ್ಮ ಇಲಾಖೆಯಿಂದ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಬಳಿಕ ಗ್ರಾಮ ಸಭೆಯಲ್ಲಿ 4 ಗ್ರಾಮಗಳಿಂದ ಮನೆ ಮನೆ ಭೇಟಿ ಹಾಗೂ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯ ಅರ್ಜಿಗಳನ್ನು ಓದಿ ಹೇಳಲಾಯಿತು.ಈ ವೇಳೆ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಮಹೇಶ ಭೋಜಪ್ಪ, ಉಪಾಧ್ಯಕ್ಷೆ ನೀಲಮ್ಮ ಯಂಕಪ್ಪ ಸೇರಿದಂತೆ ಸರ್ವ ಸದಸ್ಯರು ಹಾಗೂ ತಾಲೂಕು ಐಇಸಿ ಸಂಯೋಜಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.