ಅಂಚೆ ಇಲಾಖೆ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ

| Published : Oct 02 2024, 01:12 AM IST

ಸಾರಾಂಶ

ಅಂಚೆ ಇಲಾಖೆಯ ಸೌಲಭ್ಯಗಳ ಬಗ್ಗೆ ಸಾರ್ವಜನಿಕರು ಗಮನಹರಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯೂರು ಅಂಚೆ ವಿಭಾಗದ ಅಧೀಕಕ್ಷ ಕಲ್ಲೇಶ್ ನಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅಂಚೆ ಇಲಾಖೆಯ ಸೌಲಭ್ಯಗಳ ಬಗ್ಗೆ ಸಾರ್ವಜನಿಕರು ಗಮನಹರಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯೂರು ಅಂಚೆ ವಿಭಾಗದ ಅಧೀಕಕ್ಷ ಕಲ್ಲೇಶ್ ನಾಡ್ ಹೇಳಿದರು.

ತಾಲೂಕಿನ ಆದಿವಾಲ ಗ್ರಾಮದ ನೆಹರೂ ಗ್ರಾಮಾಂತರ ಪ್ರೌಢಶಾಲೆ ಅವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಅಧೀನದ ಅಂಚೆ ಇಲಾಖೆ ಒಂದುವರೆ ಶತಕಕ್ಕೂ ಹೆಚ್ಚು ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಆರಂಭಿಕವಾಗಿ ಕೇವಲ ಅಂಚೆ ಪತ್ರಗಳನ್ನು ತಲುಪಿಸಲಾಗುತ್ತಿತ್ತು. ನಂತರ ಕಾಲ ಸರಿದಂತೆ ಅಂಚೆ ಇಲಾಖೆಯೂ ಆಧುನೀಕರಣಗೊಂಡಿದ್ದು ಹಲವಾರು ವಿಮಾ ಸೌಲಭ್ಯಗಳು ಮತ್ತು ಅರ್ಥಿಕವಾಗಿ ಬೆಂಬಲ ಹೊಂದಬಲ್ಲ ಹಲವಾರು ಯೋಜನೆಗಳನ್ನು ಸಾರ್ವಜನಿಕರಿಗಾಗಿ ಜಾರಿಗೆ ತರಲಾಯಿತು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ, ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ ವಿಶೇಷ ವಿಮೆ ಸೌಲಭ್ಯಗಳನ್ನು ಅಂಚೆ ಇಲಾಖೆ ಹೊರತಂದಿದೆ. ಅಂಚೆ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು ಮೂವತ್ತು ವರ್ಷಗಳ ಹಿಂದೆ ನಿವೇಶನ ನೀಡಲಾಗಿದ್ದು, ಪ್ರಸ್ತುತ ಹಿರಿಯ ಅಧಿಕಾರಗಳ ಗಮನ ಸೆಳೆದು ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.

ಅಂಚೆ ಇಲಾಖೆಯ ವಿಸ್ತರಣ ವ್ಯವಸ್ಥಾಪಕ ಶಫಾಯತ್ ಉಲ್ಲಾ ಷರೀಫ್ ಮಾತನಾಡಿ, ಖಾಸಗಿ ಮತ್ತು ಅರೆ ಸರ್ಕಾರಿ ಬ್ಯಾಂಕ್ ಗಳಿಗಿಂತಲೂ ಅಂಚೆ ಇಲಾಖೆ ಆಕರ್ಷಕ ರೀತಿಯ ಮತ್ತು ಭವಿಷ್ಯದ ದೃಷ್ಠಿಯಲ್ಲಿ ಅರ್ಥಿಕ ಸಬಲತೆಯನ್ನು ಹೊಂದುವಂತಹ ಸ್ಕೀಂಗಳು ಅಂಚೆ ಇಲಾಖೆಯಲ್ಲಿ ಲಭ್ಯವಿವೆ. ಅವುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷಿ, ಮುಖಂಡರಾದ ತ್ರಿಯಂಬಕಮೂರ್ತಿ, ಚಮನ್ ಷರೀಫ್, ಮುಖ್ಯ ಶಿಕ್ಷಕ ರಂಗಪ್ಪ, ಗ್ರಾಮ ಪಂಚಾಯಿತಿ ಸದಸ್ಯೆ ಅನುಸೂಯಮ್ಮ, ಅಂಚೆ ಇಲಾಖೆ ಅಧಿಕಾರಿ ಚಿದಾನಂದ ಕುಮಾರ್, ಪ್ರೇಮ್ ಕುಮಾರ್, ಶಂಶಾಕ್ ಅಲಿಯಾ, ಶ್ರುತಿ ಸೇರಿದಂತೆ ಅಂಚೆ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.