ಸಾರಾಂಶ
ಸಿರಿಗೆರೆ: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಯೋಗ, ಸಂಗೀತ ಮತ್ತು ನೃತ್ಯವನ್ನು ಕಡ್ಡಾಯಗೊಳಿಸುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.ಸಿರಿಗೆರೆಯಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಬೆಂಗಳೂರು ವಿಭಾಗ ಹಾಗೂ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ಸಂಗೀತ, ನೃತ್ಯ ಮತ್ತು ಯೋಗವನ್ನು ಪಠ್ಯದಲ್ಲಿ ಅಳವಡಿಸಬೇಕೆಂಬುದು ನಮ್ಮ ಅಭಿಪ್ರಾಯವಲ್ಲ. ಆದರೆ ಇವುಗಳನ್ನು ರಾಜ್ಯದ ಎಲ್ಲಾ ಶಾಲೆಯಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದರು.ಮಕ್ಕಳು ಸಮುದ್ರಗಳಿದ್ದಂತೆ. ಅವರಲ್ಲಿ ಅಡಗಿರುವ ಮುತ್ತುರತ್ನಗಳನ್ನು ಹೊರತೆಗೆಯುವ ಕೆಲಸ ಯೋಗದಿಂದ ಆಗಬೇಕು. ಬದುಕಿನಲ್ಲಿ ಸೋಲು, ನಿರಾಶೆಗೆ ಗುರಿಯಾಗದಂತೆ ಸಾಧನೆಗೆ ಮೆಟ್ಟಿಲಾಗಬೇಕು. ಅಂತಹ ಸಾಧನೆಯನ್ನು ರಾಜ್ಯಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳು ಭವಿಷ್ಯ ಜೀವನದಲ್ಲಿ ಸಾಧಿಸುವಂತಾಗಲಿ ಎಂದು ಹೇಳಿದರು.
ಮನಸ್ಸಿನೊಳಗೆ ಹಲವು ಆಲೋಚನೆಗಳು ಹರಿದಾಡುತ್ತವೆ. ನೀರಿಗೆ ಕಲ್ಲು ಹಾಕಿದಾಗ ಉಂಟಾಗುವ ತರಂಗಗಳು ಕ್ರಮೇಶ ನಿಶ್ಚಲವಾಗುತ್ತವೆ. ಆ ತರಂಗಳು ತಲ್ಲಣಗೊಳ್ಳದಂತೆ ನಿಶ್ಚಲಗೊಳಿಸುವ ಕೆಲಸ ಯೋಗದಿಂದ ಆಗುತ್ತದೆ ಎಂದು ತಿಳಿಸಿದರು.ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಯೋಗ ಈ ದೇಶದ ಸಂಪತ್ತು. ಅದಕ್ಕೆ ಜಗತ್ತಿನಾದ್ಯಂತ ಈಗ ಮಾನ್ಯತೆ ಬಂದಿದೆ ಎಂದರು.ಮೈಸೂರು ವಿಭಾಗೀಯ ಉಪ ನಿರ್ದೇಶಕ ಎ.ಪರಶುರಾಮಪ್ಪ, ಚಿತ್ರದುರ್ಗ ಶಾಲಾ ಶಿಕ್ಷಣ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್, ತೀರ್ಪುಗಾರರಾಗಿದ್ದ ಸುಜಾತ ಶೆಟ್ಟಿ ಮಾತನಾಡಿದರು.ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ ಮತ್ತಿತರರಿದ್ದರು.ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಿದ ೭ ಮತ್ತು ೧೪ ವಯಸ್ಸಿನ ತಂಡದ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.