ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಕರ ಕನಸನ್ನು ನನಸು ಮಾಡಬೇಕು
ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕುಮಟಾವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಕರ ಕನಸನ್ನು ನನಸು ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ನೆಲ್ಲಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಂತರ್ಗತ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಏಳಿಗೆಯೇ ನಮ್ಮ ಉದ್ದೇಶವಾಗಿದ್ದು, ಇಲ್ಲಿನ ಅಭಿವೃದ್ಧಿ ನನ್ನ ಕನಸಿನ ಭಾಗವಾಗಿದೆ. ನಿಮ್ಮ ತಂದೆ-ತಾಯಿ ಕಂಡ ಕನಸು ನನಸಾಗಬೇಕು. ಅದಕ್ಕಾಗಿ ವಿಶೇಷ ಪ್ರಯತ್ನ ನಿಮ್ಮಿಂದಾಗಬೇಕು. ಗ್ರಾಮೀಣ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಅಧ್ಯಯನ ಪೂರಕವಾಗಿ ಕಾಲೇಜು ಬಳಿ ಇತ್ತೀಚೆಗೆ ಕ್ಯಾಂಟೀನ್ ಸೌಲಭ್ಯ ಕಲ್ಪಿಸಿದ್ದೇನೆ. ಹಾಗೆಯೇ ಭವಿಷ್ಯದ ನಾಗರಿಕರನ್ನು ರೂಪಿಸುವ ಶಿಕ್ಷಣ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಇಲ್ಲಿನ ವಿದ್ಯಾರ್ಥಿನಿ ದಿವ್ಯಾ ನಾಯ್ಕ ಪೋಲ್‌ವಾಲ್ಟ್‌ನಲ್ಲಿ ರಾಷ್ಟ್ರೀಯ ಮಟ್ಟಕ್ಕೇರಿದರೂ ಪೋಲ್‌ವಾಲ್ಟ್ ಸ್ಪರ್ಧೆಗೆ ಮತ್ತು ತರಬೇತಿಗೆ ಬೇಕಾದ ಪೋಲ್ ಇರಲಿಲ್ಲ. ಆದರೆ ಪೋಲ್ ಭಾರತದಲ್ಲಿ ತಯಾರಾಗುವುದಿಲ್ಲ ಎಂದು ನನ್ನ ಕೋರಿಕೆಯ ಮೇರೆಗೆ ಎಂ.ಎನ್. ಕೆಮಿಕಲ್ಸ್ ರಾಕೇಶ ಪಾಟೀಲ ಅವರು ಇಂಗ್ಲೆಂಡಿನಿಂದ ಲಕ್ಷಾಂತರ ಬೆಲೆ ಬಾಳುವ ಎರಡು ಪೋಲ್ ತರಿಸಿಕೊಟ್ಟಿದ್ದಾರೆ. ಒಂದನ್ನು ನೆಲ್ಲಿಕೇರಿ ಪಿಯು ಕಾಲೇಜಿನಲ್ಲಿ ಹಾಗೂ ಇನ್ನೊಂದನ್ನು ಹೊನ್ನಾವರದ ಕಾಲೇಜೊಂದರಲ್ಲಿ ಇಡುವುದರಿಂದ ಎರಡೂ ತಾಲೂಕುಗಳಲ್ಲಿ ಪೋಲ್‌ವಾಲ್ಟ್ ಸ್ಪರ್ಧಿಗಳಿಗೆ ಅನುಕೂಲವಾಗಲಿದೆ. ಶಿಕ್ಷಣ ಮತ್ತು ಕ್ರೀಡೆ ಎರಡರಲ್ಲೂ ವಿಶೇಷ ಸಾಧನೆ ನಿಮ್ಮಿಂದಾಗಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳ ಹಸ್ತಪತ್ರಿಕೆ ಜ್ಞಾನದುಂಬಿ ಅನಾವರಣಗೊಳಿಸಿ, ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾದ ಕರ್ನಾಟಕ ನೇವಲ್ ಏರಿಯಾದ ಆಫೀಸರ್ ಇನ್‌ಚಾರ್ಜ್ ಆಫ್ ಕಮ್ಯುನಿಕೇಷನ್ ಕಮಾಂಡರ್ ಕೆ. ಅನಂತರಾಜ್ ಮಾತನಾಡಿ, ಗುರುವಿನ ಮಾರ್ಗದರ್ಶನದಂತೆ ಸಾಗುವವರು ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ. ಗುರುವಿನ ಸಲಹೆ ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ, ಜೀವನದ ಗೆಲವಿಗೆ ಮಾನಸಿಕ ಸಂತುಲನ ಮುಖ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಡಿಡಿಪಿಯು ಹಾಗೂ ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಮಾತನಾಡಿದರು. ಕಾಲೇಜಿನ ಅಭಿವೃದ್ಧಿ ಸಮಿತಿಯ ನಿತ್ಯಾನಂದ ನಾಯ್ಕ, ಲಕ್ಷ್ಮೀ ನಾಯ್ಕ, ಎಂ.ಟಿ. ಗೌಡ, ಪ್ರೊ. ಆನಂದ ನಾಯ್ಕ, ಮಂಗಲಾ ನಾಯ್ಕ, ನಾಗರಾಜ ವಿ. ನಾಯ್ಕ, ಪುರಸಭೆ ಸದಸ್ಯರಾದ ತುಳಸು ಗೌಡ, ಮೋಹಿನಿ ಗೌಡ, ಗಾಯತ್ರಿ ಭಂಡಾರಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಬಂಗಾರೇಶ್ವರ ಹಾಗೂ ಮೈತ್ರಿ ನಾಯ್ಕ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಆರ್.ಎಚ್. ನಾಯ್ಕ ಸ್ವಾಗತಿಸಿದರು. ಪ್ರೊ. ಗಣೇಶ ಭಟ್, ಪ್ರೊ. ನಾಗರಾಜ ಹೆಗಡೆ, ಪ್ರೊ. ನಾಗರಾಜ.ವಿ. ನಾಯ್ಕ. ಪ್ರೊ. ಮಂಗಲಾ ನಾಯ್ಕ, ಪ್ರೊ. ಜಗದೀಶ ನಾಯ್ಕ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.