ಮೇಕೇರಿ: ನೂತನ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಸ್ತಿತ್ವಕ್ಕೆ

| Published : Apr 03 2024, 01:35 AM IST

ಸಾರಾಂಶ

ಮೇಕೇರಿಯಲ್ಲಿರುವ ಕೂರ್ಗ್ ಗವದನ ರೆಸಾರ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಲಾಂಛನ ಬಿಡುಗಡೆಗೊಳಿಸುವ ಮೂಲಕ ನೂತನ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂಸ್ಕೃತಿ, ಭಾಷೆ, ಗ್ರಾಮೀಣ ಶಿಕ್ಷಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವುದು, ಉತ್ತಮ ಆರೋಗ್ಯ ಹೊಂದಲು ಮಾರ್ಗದರ್ಶನ, ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರೂಪಿಸುವ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ನೂತನವಾಗಿ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ.

ಮೇಕೇರಿಯಲ್ಲಿರುವ ಕೂರ್ಗ್ ಗವದನ ರೆಸಾರ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಿರಿ ಬಳಗದ ಲಾಂಛನ ಬಿಡುಗಡೆಗೊಳಿಸುವ ಮೂಲಕ ನೂತನ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಯಿತು.

ಈ ಸಂದರ್ಭ ಮಾತನಾಡಿದ ಖ್ಯಾತ ವೈದ್ಯ, ಬಳಗದ ಟ್ರಸ್ಟಿ ಡಾ. ಮೋಹನ್ ಅಪ್ಪಾಜಿ, ಎಲ್ಲರೂ ಒಗ್ಗಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ತೊಂದರೆಗೊಳಗಾಗಿರುವವರನ್ನು ಗುರುತಿಸಿ ಸಹಾಯ ನೀಡುವುದು, ಕೊಡಗಿನ ಕಲೆ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕೆಂದು ಕರೆ ನೀಡಿದರು.

ಮತ್ತೋರ್ವ ಟ್ರಸ್ಟಿ ಹಾಗೂ ನಿರ್ಮಾಪಕಿ, ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ನಾವು ದುಡಿಯುವ ಒಂದು ಭಾಗವನ್ನು ಸಮಾಜದ ಏಳಿಗೆಗೆ ಮೀಸಲಿಟ್ಟು ಸಮಾಜವನ್ನು ಬೆಳೆಸಲು ಮುಂದಾಗಬೇಕೆಂದು ಕರೆ ನೀಡಿದರು. ಮತ್ತೋರ್ವ ಟ್ರಸ್ಟಿ ಹಾಗೂ ಉದ್ಯಮಿ ಕೆ.ಎಂ.ಗಣೇಶ್ ಮಾತನಾಡಿ, ಹಲವು ಸಮಾನ ಮನಸ್ಕ ಟ್ರಸ್ಟಿಗಳು ಸೇರಿ ಅಸ್ತಿತ್ವಕ್ಕೆ ತಂದ ಈ ಬಳಗವು ಹಲವು ಸಾಮಾಜಿಕ ಯೋಜನೆಗಳನ್ನು ತರುವಂತಾಗಲಿ. ಅಲ್ಲದೆ, ಕನ್ನಡ ಮತ್ತು ಕೊಡವ ಭಾಷೆಗಳ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕದಾದ್ಯಂತ ಬಳಗದ ಹೆಸರು ಪಸರಿಸಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿ ಈರಮಂಡ ಹರಿಣಿ ವಿಜಯ್, ಬಳಗದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರಲ್ಲದೆ, ಬಳಗದ ಟ್ರಸ್ಟಿಗಳು ಮತ್ತು ಕಲಾ ಸದಸ್ಯರು ಒಟ್ಟಾಗಿ ಸಹಾಯ ಹಸ್ತ ನೀಡುವುದರೊಂದಿಗೆ ಬಳಗದ ಮುನ್ನಡೆಗೆ ಸಹಕಾರ ಕೋರಿದರು.

ಟ್ರಸ್ಟಿಗಳಾದ ಸಮಾಜ ಸೇವಕಿ ನಿಶಾ ಮೋಹನ್, ಉದ್ಯಮಿ ಸುನೀತಾ ಗಣೇಶ್, ಸಿನಿಮಾ ನಿರ್ಮಾಪಕ, ನಿರ್ದೇಶಕ, ಸಾಹಿತಿ ಕೊಟ್ಟುಕತ್ತೀರಾ ಪ್ರಕಾಶ್ ಕಾರ್ಯಪ್ಪ, ವಿಜಯ್ ಉತ್ತಯ್ಯ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗದ ಸಂಯೋಜಕ ಹಾಗೂ ಎಂ.ಎ.ಕೊಡವ ವಿಭಾಗ ಸಹ ಪ್ರಾಧ್ಯಾಪಕ ಮೇಚಿರ ರವಿಶಂಕರ್ ನಾಣಯ್ಯ, ಹೈ ಕೋರ್ಟ್ ವಕೀಲ ಆನೆಡ ಹರೀಶ್ ಗಣಪತಿ, ಸಮಾಜ ಸೇವಕ ಹಾಗೂ ಕಾಫಿ ಬೆಳೆಗಾರ ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ, ಮಡಿಕೇರಿಯ ಉದ್ಯಮಿ ಕೋಲೆಯಂಡ ದೀಪಾ ಪೃಥ್ವಿ, ಚಿತ್ರ ನಟ ತೋತಿಯಂಡ ಕಿರಣ್ ಸೋಮಣ್ಣ ಹಾಜರಿದ್ದರು.

ಈರಮಂಡ ಕೇಸರಿ ಬೋಜಮ್ಮ ಹಾಗೂ ಕುಷಿ ಕಾವೇರಮ್ಮ ಪ್ರಾರ್ಥನೆ ಮಾಡಿದರು. ಅಮ್ಮಾಟಂಡ ವಿಂದ್ಯಾ ದೇವಯ್ಯ ನಿರೂಪಿಸಿದರು. ಕೋಲೆಯಂಡ ನಿಶಾ ಮೋಹನ್ ಸ್ವಾಗತಿಸಿದರು. ನಾಳಿಯಂಡ ಜಯಂತಿ ವಂದಿಸಿದರು.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ಸಾಂಸ್ಕೃತಿಕ ನೃತ್ಯ ಹಾಗೂ ಫ್ಯಾಶನ್ ಶೋ ನಲ್ಲಿ ಭಾಗವಹಿಸಿದ ಬಳಗದ ಸದಸ್ಯರಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.