ನಮ್ಮ ಬದುಕನ್ನು ಸಹನೀಯಗೊಳಿಸುವಪೌರ ಕಾರ್ಮಿಕರ ಸೇವೆ ಅನನ್ಯ: ಆರಗ

| Published : Oct 02 2024, 01:09 AM IST

ನಮ್ಮ ಬದುಕನ್ನು ಸಹನೀಯಗೊಳಿಸುವಪೌರ ಕಾರ್ಮಿಕರ ಸೇವೆ ಅನನ್ಯ: ಆರಗ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೋಮವಾರ ಸಂಜೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪಟ್ಟಣಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯ ವಿಲೇವಾರಿ ಸ್ಥಳೀಯಾಡಳಿತಗಳಿಗೆ ದೊಡ್ಡ ಸವಾಲಾಗಿದೆ. ಹಸಿ ಮತ್ತು ಒಣ ಕಸ ಬೇರ್ಪಡಿಸಿ ಕೊಡುವ ವಿಚಾರದಲ್ಲಿ ಸಾರ್ವಜನಿಕರು ಪೌರ ಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಸೋಮವಾರ ಸಂಜೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಗೌರವಿಸಿ, ದಿನನಿತ್ಯ ತಮ್ಮ ವೈಯಕ್ತಿಕ ಬದುಕನ್ನು ಮರೆತು ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವ ಮೂಲಕ ನಮ್ಮ ಬದುಕನ್ನು ಸಹನೀಯ ಗೊಳಿಸುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಈ ಬಂಧುಗಳ ಸೇವೆಯ ಬಗೆಗೆ ನಾಗರಿಕ ಸಮಾಜ ಗೌರವ ಭಾವನೆಯನ್ನು ಹೊಂದಬೇಕಿದೆ ಎಂದರು.

ಹಿರಿಯ ಪೌರ ಕಾರ್ಮಿಕ ಮಹಿಳೆಯಿಂದ ದೀಪ ಬೆಳಗಿಸುವ ಮೂಲಕ ಪೌರ ಕಾರ್ಮಿಕರಿಗೆ ಗೌರವ ತೋರಿದ ಶಾಸಕ ಆರಗ ಜ್ಞಾನೇಂದ್ರ, ಪ್ರಧಾನಿ ನರೇಂದ್ರ ಮೋದಿಯವರೇ ಪೌರ ಕಾರ್ಮಿಕರ ಕಾಲು ತೊಳೆದು ತಮ್ಮ ಗೌರವ ತೋರಿದ್ದಾರೆ. ಸ್ವಚ್ಛತೆಗೆ ರಾಜ್ಯದಲ್ಲಿ ಮಾದರಿಯಾಗಿರುವ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ತಮ್ಮ ವೈಯಕ್ತಿಕ ಬದುಕನ್ನು ಕಡೆಗಣಿಸಿ ದುಡಿಯುವ ಸ್ವಚ್ಛತಾಕರ್ಮಿಗಳನ್ನು ಗೌರವಿಸುವುದು ಒಂದು ಸಾರ್ಥಕ ಕಾರ್ಯಕ್ರಮವಾಗಿದೆ. ನಮ್ಮ ಮನೆ ಕಸವನ್ನು ನಾವೇ ವಿಲೇವಾರಿ ಮಾಡುವಂತಾಗಬೇಕು. ಎಂದರು.

ಮದ್ಯ ಗುಟ್ಕಾ ವ್ಯಸನಗಳಿಗೆ ಬಲಿಯಾಗುತ್ತಿರುವ ಪೌರ ಕಾರ್ಮಿಕರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುವ ಅಗತ್ಯವಿದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿರುವ 24/7 ನೀರಿನ ಕರ ಶೇ. 95 ಗಿಂತಲೂ ಮಿಕ್ಕಿ ವಸೂಲಾಗುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ. ಪಟ್ಟಣದ ಕುಡಿಯುವ ನಿರಿನ ಯೋಜನೆಯಂತೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತಲೂಕಿನ 35 ಸಾವಿರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿನ ಯೋಜನೆ ಪ್ರಗತಿಯಲ್ಲಿದೆ ಎಂದರು.

ಪ.ಪಂ. ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಗ್ಯಾರೆಂಟಿ ಯೋಜನೆಯ ತಾಲೂಕು ಅಧ್ಯಕ್ಷ ನಾಬಳ ಶಚ್ಚೀಂದರ ಹೆಗ್ಡೆ, ಸಹಕಾರಿ ಮುಖಂಡ ಕೆ.ನಾಗರಾಜ ಶೆಟ್ಟಿ, ಮುಖ್ಯಾಧಿಕಾರಿ ನಾಗರಾಜ್ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.