ಸಾರಾಂಶ
ಬಳ್ಳಾರಿ: ನೈಸರ್ಗಿಕ ಸಂಪನ್ಮೂಲವಾದ ನೀರು ನಮ್ಮೆಲ್ಲರಿಗೂ ಅತ್ಯಮೂಲ್ಯವಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ ಜನ ಸಮುದಾಯದವರಿಗೆ ನೀರಿನ ಮಹತ್ವದ ಅರಿವು ಮೂಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನರ್ಮಲ್ಯ ಇಲಾಖೆ, ಜಿಪಂ ಸಹಯೋಗದಲ್ಲಿ ಫೀಡ್‌ಬ್ಯಾಕ್ ಫೌಂಡೇಶನ್ ವತಿಯಿಂದ ಜಲ ಜೀವನ್ ಮಿಷನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಕುರಿತು ಆಯೋಜಿಸಿದ್ದ ನಾಲ್ಕು ದಿನ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.ದೇಶದ ಅಭಿವೃದ್ಧಿಯು ಗ್ರಾಮದ ಅಭಿವೃದ್ಧಿಯಲ್ಲಿ ಅಡಗಿದೆ. ಹಾಗಾಗಿ ಗ್ರಾಪಂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಮಗ್ರ ಗ್ರಾಮ ಅಭಿವೃದ್ಧಿಗೆ ಕಾರ್ಯಗತರಾಗಬೇಕು ಎಂದರು.
ತರಬೇತಿ ಪಡೆದವರು ಕ್ಷೇತ್ರ ಪರಿವೀಕ್ಷಣೆ ಕೈಗೊಳ್ಳಬೇಕು.ಇದರಿಂದ ಜಲ ಜೀವನ್ ಮಿಷನ್ 24*7 ಅನುಷ್ಠಾನಗೊಳಿಸಲು ಇನ್ನಷ್ಟು ಅನುಕೂಲಕರವಾಗಲಿದೆ ಎಂದು ತಿಳಿಸಿದರು.ಜೆಜೆಎಂ ಯೋಜನೆಯಡಿ ಶುದ್ಧ ನೀರು ಸರಬರಾಜು ಮುಖ್ಯ ಮಾಡುವುದು ಮುಖ್ಯ ಧ್ಯೇಯವಾಗಬೇಕು. ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಗ್ರಾಪಂ ಅಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಚ್.ಇಂದೂಧರ್, ಫೀಡ್ ಬ್ಯಾಂಕ್ ಫೌಂಡೇಶನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಜಯ್ ಸಿಂಹ, ಜಿಪಂನ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಸ್ವಾಮಿ, ಫೀಡ್ ಬ್ಯಾಕ್ ಸಂಸ್ಥೆಯ ರಾಜ್ಯ ಯೋಜನಾ ಸಮನ್ವಯಾಧಿಕಾರಿ ಡಾ. ನಂದಕುಮಾರ್, ಜಿಲ್ಲಾ ಸಂಯೋಜಕ ಓಂಕಾರ್, ಅಭಿಷೇಕ್. ಎಚ್., ತಿಪ್ಪೇಸ್ವಾಮಿ, ಶಶಿಕಾಂತ್, ರವಿ, ಮಂಜುನಾಥ್, ಐಎಸ್‌ಆರ್‌ಒ ಶ್ರೀಧರ್ ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು, ವಿವಿಧ ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.