ಸಾರಾಂಶ
ಯಲಬುರ್ಗಾ:
ತಾಲೂಕಿನ ಮಕ್ಕಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಪುಷ್ಟಿ ಯೋಜನೆಯಡಿ ಉತ್ತಮ ಎಸ್‌ಡಿಎಂಸಿ ಶಾಲೆಯೆಂದು ಪರಿಗಣಿಸದಿರುವುದನ್ನು ಖಂಡಿಸಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.೧೦-೧೫ ವರ್ಷಗಳಿಂದಲೂ ಹಿಂದೆ ಇರುವ ಹಾಗೂ ಈಗಿರುವ ಸಮಿತಿ, ಗ್ರಾಮಸ್ಥರು ಶಾಲೆಗೆ ಬೇಕಾಗಿರುವ ಎಲ್ಲ ಮೂಲಭೂತ ಸೌಕರ್ಯ ದೊರಕಿಸಿ ಕೊಟ್ಟಿದ್ದಾರೆ. ಜತೆಗೆ ಖಾಸಗಿ ಕಂಪನಿಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಸಹಾಯ-ಸಹಕಾರ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಪರವಾಗಿ ಮುಂದುವರಿಯಲು ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟಿದ್ದೇವೆ. ಶಾಲೆಯನ್ನು ಕೂಡ ಉತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಯೋಜನೆಗೆ ಬೇಕಾದ ಎಲ್ಲ ಕಾರ್ಯಕ್ರಮ ಮಾಡಿದ್ದೇವೆ. ಇನ್ನೂ ಈ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದಾಗ ನಮ್ಮ ಶಾಲೆ ಯಾವುದಾದರಲ್ಲೂ ಕಡಿಮೆ ಇಲ್ಲ. ಹೀಗಾಗಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂಕ ದೊರೆಕಿದ್ದರೂ ಸಹ ಯಾಕೆ ನಮ್ಮೂರ ಶಾಲೆ ಆಯ್ಕೆಯಾಗಲಿಲ್ಲ? ಬೇರೆ ಶಾಲೆ ಹೇಗೆ ಆಯ್ಕೆಯಾಯಿತು? ಇದಕ್ಕೆ ಶಿಕ್ಷಣ ಇಲಾಖೆ ಉತ್ತರಿಸಬೇಕು. ಇದಕ್ಕೆ ಇಲಾಖೆಯೇ ಹೊಣೆ. ಕೂಡಲೇ ಇಲಾಖೆ ಇದನ್ನು ಪರಿಶೀಲಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಎಸ್‌ಡಿಎಂಸಿ ವಿಸರ್ಜಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿ ಎಚ್ಚರಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಶೇಖರಗೌಡ ಪೊಲೀಸ್‌ಪಾಟೀಲ, ಗ್ರಾಪಂ ಸದಸ್ಯ ಹನುಮಪ್ಪ ಕರೆಕುರಿ, ಗ್ರಾಮದ ಹಿರಿಯರಾದ ನೀಲನಗೌಡ ಹೊಸ್ಮನಿ, ಗಾಳೆಪ್ಪ ಹರಿಜನ, ದೇವಪ್ಪ ಆರೇರ್ ಇದ್ದರು.