ಸಾರಾಂಶ
ಗ್ರಾಮೀಣ ಸೌಧದಲ್ಲಿ ಶಾಸಕ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ತೆಪ್ಪೋತ್ಸವ ಸಮಿತಿ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ನಾಡಿನಲ್ಲೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ರಾಮೇಶ್ವರ ದೇವರ ತೆಪ್ಪೋತ್ಸವ ಸಮಿತಿ ರಚನೆಯಲ್ಲಿ ತೆಪ್ಪೋತ್ಸವ ಸಮಿತಿಯ ಸಂಚಾಲಕರ ನೇಮಕಕ್ಕೆ ಸಂಭಂದಿಸಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಉಂಟಾಗಿರುವ ರಾಜಕೀಯ ಜಿದ್ದಾಜಿದ್ದಿ ಭಿನ್ನಾಭಿಪ್ರಾಯದಿಂದಾಗಿ ಈ ಬಾರಿಯ ತೆಪ್ಪೋತ್ಸವ ನಡೆಸುವ ಹೊಣೆಗಾರಿಕೆಯನ್ನು ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು ವಹಿಸುವಂತೆ ನಿರ್ಣಯಿಸಲಾಗಿದೆ.ಪುರಾಣ ಪ್ರಸಿದ್ಧವಾದ ಇಲ್ಲಿನ ಎಳ್ಳಮಾವಾಸ್ಯೆ ಜಾತ್ರೆಗೆ ಪೂರಕವಾಗಿ ಮುಂಬರುವ ಜನವರಿ 1ರಂದು ನಡೆಯಲಿರುವ ತೆಪ್ಪೋತ್ಸವ ಸಮಿತಿಯ ರಚನೆಗಾಗಿ ಶಾಸಕ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಂಜೆ ಗ್ರಾಮೀಣ ಸೌಧದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ತೆಪ್ಪೋತ್ಸವ ಸಮಿತಿಯ ಸಂಚಾಲಕರ ನೇಮಕಕ್ಕೆ ಸಂಭಂದಿಸಿ ಸಭೆಯಲ್ಲಿದ್ದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲಾಟದ ನಡುವೆ ಎರಡು ಬಣಗಳ ನಡುವೆ ಒಮ್ಮತ ಮೂಡಿಸುವಲ್ಲಿ ಸಭೆ ವಿಫಲವಾದ ಕಾರಣ ಅಂತಿಮವಾಗಿ ಎರಡೂ ಪಕ್ಷಗಳ ಮುಖಂಡರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ರಾಮೇಶ್ವರ ದೇವರ ಅದ್ಧೂರಿ ತೆಪ್ಪೋತ್ಸವ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಳೆದ 50 ವರ್ಷಗಳಿಂದ ಅನೂಚಾನವಾಗಿ ಅತ್ಯಂತ ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದ್ದು, ಈ ಉತ್ಸವಕ್ಕೆ ಧಕ್ಕೆಯಾಗದಂತೆ ಯಥಾವತ್ತಾಗಿ ಮುಂದುವರೆಸುವ ಸಲುವಾಗಿ ಅಂತಿಮವಾಗಿ ಶಾಸಕರ ಅಧ್ಯಕ್ಷತೆ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜುನಾಥಗೌಡರ ಗೌರವಾಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಈ ಬಾರಿಯ ತೆಪ್ಪೋತ್ಸವವನ್ನು ನಡೆಸಲು ಅನಿವಾರ್ಯವಾಗಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಪಪಂ ಅಧ್ಯಕ್ಷ ರಹಮತ್‍ಉಲ್ಲಾ ಅಸಾದಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚ್ಚೀಂದ್ರ ಹೆಗ್ಡೆ, ತಾಪಂ ಇಒ ಎಂ.ಶೈಲಾ, ಪಪಂ ಸಿಒ ನಾಗರಾಜ್, ಶಿರಸ್ತೆದಾರ್ ಸತ್ಯಮೂರ್ತಿ ಇದ್ದರು.