ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ರಾಜ್ಯದ ಮೂವರು ಹಿರಿಯ ಸಾಹಿತಿಗಳಾದ ಶಿವಮೊಗ್ಗದ ಅಂಬ್ರಯ್ಯ ಮಠ (ಇತಿಹಾಸ ಸಂಶೋಧನೆ), ಚಿಕ್ಕಮಗಳೂರಿನ ಡಾ. ಎಚ್.ಎಸ್. ಸತ್ಯನಾರಾಯಣ (ವಿಮರ್ಶೆ), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ) ಇವರಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ಪ್ರದಾನ ಮಾಡಲಾಯಿತು.ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ಪುರಸ್ಕಾರವನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರ್ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಗಣಕ ಪಿತಾಮಹ ನಾಡೋಜ ಡಾ. ಕೆ.ಪಿ. ರಾವ್ ವಹಿಸಿ ಮಾತನಾಡಿ, ಎಲ್ಲ ಪ್ರಶಸ್ತಿ ಪುರಸ್ಕೃತರು ಅಭಿನಂದನಾರ್ಹರು. ಸಾಹಿತ್ಯ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕಾಲಿಟ್ಟಿದ್ದು ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ತರಲಿದೆ. ಇದರ ಕುರಿತು ನಾವು ಎಚ್ಚರದಿಂದ ಇರಬೇಕು ಎಂಬ ಕಿವಿ ಮಾತನ್ನು ಹೇಳಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಮಳಿಗೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಇದರ ಜಿಲ್ಲಾ ಆಯುಕ್ತರಾಗಿ ಆಯ್ಕೆಯಾದ ಜನಾರ್ದನ ಕೊಡವೂರು ಹಾಗೆಯೇ ಅಂಚೆ ಇಲಾಖೆಯ ಶ್ರೇಷ್ಠ ಪುರಸ್ಕಾರ ಮಾರ್ಕೆಟಿಂಗ್ ಎಕ್ಸಲೆನ್ಸ್ ಪುರಸ್ಕೃತಗೊಂಡ ಪೂರ್ಣಿಮಾ ಜನಾರ್ದನ ದಂಪತಿಗಳನ್ನು ಗೌರವಿಸಲಾಯಿತು.ಉಪಾಧ್ಯಕ್ಷ ಮಧುಸೂದನ್ ಹೇರೂರು ಸ್ವಾಗತಿಸಿದರು. ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆ ಮಾಡಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು. ಸಂಚಾಲಕಿ ಸಂಧ್ಯಾ ಶೆಣೈ ವಂದಿಸಿದರು.