ಮಲದಕಲ್ ಸರ್ಕಾರಿ ಜಾಗ ಕಬಳಿಕೆ, ಕ್ರಮಕ್ಕೆ ಆಗ್ರಹ

| Published : May 23 2024, 01:01 AM IST

ಸಾರಾಂಶ

ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿ, ಕಬಳಿಕೆ ಮಾಡಿರುವುದನ್ನು ವಶಕ್ಕೆ ಪಡೆದು ಹಳೆ ನಿವೇಶದಲ್ಲಿಯೇ ಮಹಿಳರಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ಕ್ರಮ ಜರುಗಿಸಬೇಕು. ಸರ್ಕಾರಿ ಜಾಗವನ್ನು ದೋಚಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ರೈತ ಸಂಘ, ಹಸಿರು ಸೇನೆ, ಕೆಆರ್‌ಎಸ್‌ ಸಮಿತಿಯಿಂದ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿ ಮಹಿಳಾ ಶೌಚಾಲಯದ ನಿವೇಶನವನ್ನು ಅಕ್ರಮವಾಗಿ ಕಬಳಿಕೆ ಮಾಡಿಕೊಂಡು, ಗ್ರಾಪಂನಿಂದ ದಾಖಲೆ ಪಡೆದಿದ್ದು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರೈತ ಸಂಘ (ಕೆಆರ್‌ಎಸ್‌) ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಬುಧವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎರಡೂ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಡಿಸಿಗೆ ಮನವಿ ಸಲ್ಲಿಸಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮಲದಕಲ್ ಗ್ರಾಮದ ಗೌಂಠಾನ ಜಾಗದಲ್ಲಿ ಈ ಹಿಂದೆ ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿದ್ದಾಗ ಮಹಿಳೆಯರಿಗಾಗಿ ಶೌಚಾಲಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಹಳೆದಾದ ಮೇಲೆ ಕಟ್ಟಡ ನೆಲಸಮಗೊಂಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮದ ಲಕ್ಷ್ಮಣ ಭೋವಿ ಎಂಬುವರು ನಿವೇಶನ ಸ್ವಚ್ಛಗೊಳಿಸಿ ಮರಂ ಹಾಕುತ್ತಿದ್ದಾರೆ. ಈ ನಿವೇಶನಕ್ಕೆ ಗ್ರಾಪಂನಲ್ಲಿ ಇ-ಸ್ವತ್ತು ಮೂಲಕ ದಾಖಲೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿ, ಕಬಳಿಕೆ ಮಾಡಿರುವುದನ್ನು ವಶಕ್ಕೆ ಪಡೆದು ಹಳೆ ನಿವೇಶದಲ್ಲಿಯೇ ಮಹಿಳರಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ಕ್ರಮ ಜರುಗಿಸಬೇಕು. ಸರ್ಕಾರಿ ಜಾಗವನ್ನು ದೋಚಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಷ್ಟೇ ಅಲ್ಲದೇ ಇ-ಸ್ವತ್ತು ನೀಡಿರುವ ಅಧಿಕಾರಿಗಳ ವಿರುದ್ಧವು ಸಹ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬೂದೆಯ್ಯ ಸ್ವಾಮಿ ಗಬ್ಬೂರು, ತಾಲೂಕು ಉಪಾಧ್ಯಕ್ಷ ಬ್ರಹ್ಮಯ್ಯ ಆಚಾರಿ, ದೇವದುರ್ಗ ತಾಲೂಕು ಗೌರವಾಧ್ಯಕ್ಷ ಶರಣಗೌಡ ಮಲದಕಲ್‌, ರೈತ ಮುಖಂಡರಾದ ಗನಿಸಾಬ್‌, ಉಮ್ಮಣ್ಣ ನಾಯಕ,ಹುಚ್ಚಪೀರ ಸಾಬ್‌ ಅದೇ ರೀತಿ ಕೆಆರ್‌ಎಸ್‌ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಸೈಯದ ಅಬ್ಬಾಸಲಿ, ಉಪಾಧ್ಯಕ್ಷ ಸಂತೋಷ ಹಿರೇದಿನ್ನಿ, ಸದಸ್ಯ ಕೆ.ಗಿರಿಲಿಂಗಸ್ವಾಮಿ ಇತರರು ಇದ್ದರು.