ಸಾಗರೋಪಾದಿಯಲ್ಲಿ ಅಂಜನಾದ್ರಿಗೆ ಆಗಮಿಸುತ್ತಿರುವ ಮಾಲಾಧಾರಿಗಳು

| Published : Dec 13 2024, 12:47 AM IST

ಸಾರಾಂಶ

ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಸಹಸ್ರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಆಗಮಿಸುತ್ತಿರುವುದರಿಂದ ಅಂಜನಾದ್ರಿಯಲ್ಲಿ ವಿಶೇಷ ಸಂಭ್ರಮ ಕಂಡು ಬರುತ್ತಿದೆ.

- ಆಂಜನೇಯ ಸ್ವಾಮಿ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಸಂಭ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಸಹಸ್ರಾರು ಸಂಖ್ಯೆಯ ಹನುಮ ಮಾಲಾಧಾರಿಗಳು ಆಗಮಿಸುತ್ತಿರುವುದರಿಂದ ಅಂಜನಾದ್ರಿಯಲ್ಲಿ ವಿಶೇಷ ಸಂಭ್ರಮ ಕಂಡು ಬರುತ್ತಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ (ಚಿಕ್ಕರಾಂಪುರ) ಗ್ರಾಮದಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷ ನಡೆಯುತ್ತಿರುವ ಹನುಮಮಾಲಾ ನಿಸರ್ಜನೆ ಕಾರ್ಯಕ್ರಮಕ್ಕೆ ಕರ್ನಾಟಕದ ಸೇರಿದಂತೆ ಬೇರೆ ಬೇರೆ ಕಡೆಯಿಂದಲೂ ಹನುಮಮಾಲಾಧಾರಿಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು, ಬಸ್ ಹಾಗೂ ಕಾಲ್ನಡಿಗೆ ಮೂಲಕ ಅಂಜನಾದ್ರಿಗೆ ಆಗಮಿಸುತ್ತಿದ್ದಾರೆ. ಮಾಲಾಧಾರಿಗಳಿಗಾಗಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅಂಜನಾದ್ರಿಯಲ್ಲಿ ಭಕ್ತರಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.

ಅಂಜನಾದ್ರಿಯತ್ತ ಹನುಮ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿರುವುದು ರಸ್ತೆಗಳಲ್ಲಿ ಕಂಡುಬರುತ್ತಿದೆ.

ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರ ತಂಡಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಅಗತ್ಯ ಔಷಧಿಗಳು, ಎರಡು ಅಂಬುಲೆನ್ಸ್ ತುರ್ತು ಸೇವೆಗಾಗಿ ಕಾಯ್ದಿರಿಸಲಾಗಿದೆ. ಪೊಲೀಸ್ ಭದ್ರತೆಗಾಗಿ ಹೊರ ಪೊಲೀಸ್ ಠಾಣೆ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗಿದೆ.

ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಮಾತನಾಡಿ, ಹನುಮಮಾಲಾ ವಿಸರ್ಜನ ಕಾರ್ಯಕ್ರಮ ಗುರುವಾರ ಮತ್ತು ಶುಕ್ರವಾರ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾಡಳಿತ, ಗಂಗಾವತಿ ತಾಲೂಕು ಆಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ವಿವಿಧ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ದರ್ಶನದ ವ್ಯವಸ್ಥೆಯು ಅತ್ಯಂತ ಸೂಕ್ತ ರೀತಿಯಲ್ಲಾಗಬೇಕೆಂಬ ಜಿಲ್ಲಾಡಳಿತ ಉದ್ದೇಶದಂತೆ ಈ ವರ್ಷ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಭಕ್ತಾಧಿಗಳಿಗಾಗಿ ಊಟ, ಸ್ನಾನದ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಾಡಲಾಗಿದೆ. ಎಲ್ಲಾ ಕಡೆ ಸ್ವಚ್ಛತೆಗೂ ಕ್ರಮ ವಹಿಸಲಾಗಿದೆ. 70 ಸಾವಿರದಿಂದ 1 ಲಕ್ಷಕ್ಕೂ ಮೇಲ್ಪಟ್ಟು ಭಕ್ತಾಧಿಗಳು ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ. ಪ್ರಸಾದವಾಗಿ ಭಕ್ತಾಧಿಗಳಿಗೆ ಲಡ್ಡು, ದಾರ, ಸಿಂಧೂರ ಮತ್ತು ತೀರ್ಥ ಬಾಟಲಿ ನೀರು ನೀಡುವ ವ್ಯವಸ್ಥೆ ಸಹ ಮಾಡಲಾಗಿದೆ ಎಂದರು.

ಈ ಸಂದರ್ಭ ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಗಂಗಾವತಿ ತಹಸೀಲ್ದಾರ ಯು. ನಾಗರಾಜ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.