ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಕ್ತಿ ಸಮರ್ಪಣೆಗಷ್ಟೇ ಸೀಮಿತವಾಗದೇ ಕರಸೇವೆಯೊಂದಿಗೆ ಶ್ರಮದಾನ ನಡೆಸುವ ಮೂಲಕ ಇತರೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮಾದರಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಚಂದ್ರಗುತ್ತಿ ಗ್ರಾಮದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಭಕ್ತಿ ಸಮರ್ಪಣೆಗಷ್ಟೇ ಸೀಮಿತವಾಗದೇ ಕರಸೇವೆಯೊಂದಿಗೆ ಶ್ರಮದಾನ ನಡೆಸುವ ಮೂಲಕ ಇತರೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮಾದರಿಯಾಗಿದ್ದಾರೆ.ಚಂದ್ರಗುತ್ತಿ ಗ್ರಾಮದ ರಥ ಬೀದಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ೭೪ ಮಾಲಾಧಾರಿಗಳಿದ್ದಾರೆ. ಕಳೆದ ಹಲವು ವರ್ಷಗಳಿಂದ ತಮ್ಮ ಶ್ರಮದಾನದ ಮೂಲಕ ದೇವಸ್ಥಾನದ ಆಜುಬಾಜಿನಲ್ಲಿಯ ನಾಗರಕಟ್ಟೆಗೆ ತಡೆಗೋಡೆ ನಿರ್ಮಿಸಿದ್ದಾರೆ.
ಸನ್ನಿಧಾನದ ಮುಂಭಾಗದಲ್ಲಿರುವ ನಾಗದೇವರ ಕಟ್ಟೆಗೆ ಸುಸಜ್ಜಿತವಾದ ಕಟ್ಟೆ ಮತ್ತು ಕಾಂಪೌಂಡ್ ಇಲ್ಲದೇ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಮತ್ತು ಭಕ್ತರಿಂದ ಸಹಾಯ ಪಡೆದು ಸುಮಾರು ೨ ಲಕ್ಷ ರು. ವೆಚ್ಚದಲ್ಲಿ ನಾಗರಕಟ್ಟೆಯ ಸುತ್ತಲೂ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿ ತಾವೇ ಶ್ರಮದಾನದ ಮೂಲಕ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸುತ್ತಲೂ ಈಗ ಸುಸಜ್ಜಿತವಾದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದ ಹಬ್ಬ ಹರಿದಿನಗಳಲ್ಲಿ ಬರುವ ಸ್ಥಳೀಯ ಭಕ್ತರಿಗೆ ಅನುಕೂಲವಾಗಲಿದೆ. ಕಾಂಪೌಂಡ್ ನಿರ್ಮಾಣದಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತದೆ ಅಲ್ಲದೇ ದೇವಸ್ಥಾನದ ಅಂದವು ಹೆಚ್ಚಿದೆ.ವಿಶೇಷ ಎಂದರೆ ಮಾಲಾಧಾರಿಗಳು ಪ್ರತಿ ವರ್ಷವೂ ಶ್ರದ್ಧಾಭಕ್ತಿಯಿಂದ ಒಂದಲ್ಲ ಒಂದು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳ ನಡುವೆಯೂ ಸನ್ನಿಧಾನದ ಅಭಿವೃದ್ಧಿಗಾಗಿ ಸಮಯ ಮೀಸಲಿಟ್ಟು ಕಟ್ಟಡದ ದುರಸ್ತಿ ಬಣ್ಣ ಬಳಿಯುವುದು ಮತ್ತು ಸ್ವಚ್ಛತಾ ಕಾರ್ಯಗಳನ್ನು ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಮತ್ತು ಶ್ರೀ ರೇಣುಕಾಂಬೆಯ ಭಕ್ತರಿಗೆ ಅನುಕೂಲವಾಗುವ ದೃಷ್ಠಿಯಿಂದ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದಾರೆ. ಆದರೆ ೬೫೦ ಅಡಿ ಆಳ ಕೊರೆದರೂ ನೀರು ಸಿಗದೇ ಬೋರ್‌ವೆಲ್ ವಿಫಲಗೊಂಡಿದೆ. ಇದಕ್ಕೆ ೮೩ ಸಾವಿರ ರು. ವಿನಿಯೋಗವಾಗಿದೆ. ಇದರಿಂದ ದೃತಿಗೆಡದ ಮಾಲಾಧಾರಿಗಳು ಮುಂದಿನ ದಿನಗಳಲ್ಲಿ ಮರಳಿ ಪ್ರಯತ್ನ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಾಗದೇವರ ಕಟ್ಟೆಗೆ ತಡೆಗೋಡೆ ನಿರ್ಮಾಣ ಮಾಡಿದ್ದೇವೆ. ಸನ್ನಿಧಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ನಾವೆಲ್ಲರೂ ಸೇರಿ ಈ ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಲಾಧಾರಿಗಳು ತಿಳಿಸಿದ್ದಾರೆ.