ಹಾವೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮಾದಿಗ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಈ ಪೈಕಿ ಸಮಾಜದ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಬಹುದೊಡ್ಡ ಮಾದಿಗ ಸಮಾಜ. ಸಿದ್ದರಾಮಯ್ಯ ನೇತೃತ್ವದ ಕಳೆದ ಸರ್ಕಾರದಲ್ಲಿ ಸಮಾಜದ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ಆದ್ಯತೆ ಮೇರೆಗೆ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದರೂ ಸಹಿತ ಅನ್ಯಾಯ ಮಾಡಲಾಗಿದೆ. ಇದೀಗ ಡಿಕೆಶಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದ್ದರೂ ಸಹಿತ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡುತ್ತಲೇ ಇದೆ. 1970ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಡಾ. ಬಾಬು ಜಗಜೀವನ್‌ರಾಂ ಅವರಿಗೂ ಅನ್ಯಾಯ ಮಾಡಿದೆ ಎಂದು ಅಸಮಾಧಾನ ಹೊರ ಹಾಕಿದರು.

ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಒಳ್ಳೆಯ ಚಾರಿತ್ರ್ಯ ಹೊಂದಿರುವ ಕೆ.ಎಚ್. ಮುನಿಯಪ್ಪ ಅವರು ಏಳು ಬಾರಿ ಸಂಸದರಾಗಿ, ಸಚಿವರಾಗಿ ಆಡಳಿತ ಮಾಡಿದ್ದಾರೆ. ಕಾನೂನು ಪದವೀಧರರಾಗಿರುವ ಅವರಿಗೆ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು. ಜತೆಗೆ ಸಮಾಜ ಕಲ್ಯಾಣ ಖಾತೆಯನ್ನು ನೀಡಬೇಕು. ಇನ್ನೂ ಇಬ್ಬರು ಶಾಸಕರಾದ ಆರ್.ಬಿ. ತಿಮ್ಮಾಪುರ ಹಾಗೂ ಮೈಸೂರಿನ ಡಾ. ತಿಮ್ಮಯ್ಯ ಅವರಿಗೆ ಸಚಿವ ಸ್ಥಾನ ನೀಡಿ, ತಾರತಮ್ಯ ಮಾಡದೆ ಮಹತ್ವದ ಖಾತೆಗಳನ್ನು ನೀಡಬೇಕೆಂದು ಒತ್ತಾಯಿಸಿದ ಅವರು, ಸಚಿವ ಸ್ಥಾನ ನೀಡದಿದ್ದರೆ ಮಾದಿಗರು ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಆದಿಜಾಂಬವ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಸುಭಾಸ ಬೆಂಗಳೂರ, ಪರಮೇಶ ದೇಸಳ್ಳಿ, ಮಲ್ಲೇಶಪ್ಪ ಕಡಕೋಳ, ನಾಗರಾಜ ಬಾಲಣ್ಣನವರ ಉಪಸ್ಥಿತರಿದ್ದರು.ಒಳ ಮೀಸಲಾತಿ ವಿಷಯದಲ್ಲಿ ಎಲ್ಲ ವರದಿಗಳ ಶಿಫಾರಸ್ಸನ್ನು ಬದಿಗಿರಿಸಿ, ಅಂದಿನ ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಸಿ. ಮಹದೇವಪ್ಪರು ತಮ್ಮದೆ ನಿರ್ಣಯ ಕೈಗೊಂಡ ಮೇರೆಗೆ ಸಿದ್ದರಾಮಯ್ಯ ಮಾದಿಗ ಎಡಗೈಗೆ ಶೇ.5.25, ಬಲಗೈಗೆ ಶೇ. 5.25 ನೀಡಿ, ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದ್ದಾರೆ. ಈ ಅನ್ಯಾಯದ ಫಲವೇ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದಾರೆ ಎಂದು ಡಿ.ಎಸ್‌. ಮಾಳಗಿ ಆಗ್ರಹಿಸಿದ್ದಾರೆ.