ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ: ಡಾ.ಕಾಂತರಾಜು

| Published : Jul 24 2025, 12:45 AM IST

ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ: ಡಾ.ಕಾಂತರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ಸ್ಕ್ರೀನಿಂಗ್‌ ಟೆಸ್ಟ್‌ ಮಾಡುವ ಮೂಲಕ ಮಲೇರಿಯಾ ರೋಗ ಬಾರದಂತೆ ಎಚ್ಚರ ವಹಿಸಲು ಎಲ್ಲರೂ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಮಲೇರಿಯಾ ವಿರೋಧ ಮಾಸಾಚರಣೆ ಪ್ರಯುಕ್ತ ಖಾಸಗಿ ವೈದ್ಯರು ಮತ್ತು ಪ್ರಯೋಗಶಾಲಾ ತಂತ್ರಜ್ಞರಿಗೆ ಮಲೇರಿಯಾ ನಿಯಂತ್ರಣ ಕುರಿತು ಅಡ್ವೋಕೇಸಿ ಕಾರ್ಯಾಗಾರ ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಶ್ರಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಶಿಕ್ಷಣ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಮಾತನಾಡಿ, ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ಸ್ಕ್ರೀನಿಂಗ್‌ ಟೆಸ್ಟ್‌ ಮಾಡುವ ಮೂಲಕ ಮಲೇರಿಯಾ ರೋಗ ಬಾರದಂತೆ ಎಚ್ಚರ ವಹಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಮ್ಮ ತಂಡವು ಮಲೇರಿಯಾ ರೋಗದ ವಿಷಯವಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಅದರಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಆಂದೋನದ ಮೂಲಕ ಜಾಗೃತಿ ಮಾಡಿಸುವ ನಿಟ್ಟಿನಲ್ಲಿ ಕಾರ್ಯಗತಗೊಳಿಸಲಾಗುವುದು. ಸ್ಥಳೀಯವಾಗಿ ನೋಡಿದರೆ ಮಲೇರಿಯಾ ರೋಗದ ಬಗ್ಗೆ ಮಾಹಿತಿಯು ಸದ್ಯಕ್ಕೆ ಇರುವುದಿಲ್ಲ, ಆದರೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕೀಟ ಶಾಸ್ತ್ರಜ್ಞೆ ಜಾನೇಟ್‌ ಮಾತನಾಡಿ, ಪ್ರತಿವರ್ಷ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಜುಲೈ ತಿಂಗಳಲ್ಲಿ ಮಾಡಿಕೊಂಡು ಬರುತ್ತಿದ್ದೇವೆ. ಮಳೆಗಾಲ ಆರಂಭವಾಗುವ ಮುನ್ನ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದರಂತೆ ಜೂನ್‌ ತಿಂಗಳಲ್ಲಿ ಮಾಡಬೇಕಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಜುಲೈನಲ್ಲಿ ಮಾಡಿಕೊಂಡು ಬರುತ್ತಿದ್ದೇವೆ ಎಂದರು.ಸೊಳ್ಳೆಗಳು ಯೆಥೇಚ್ಚವಾಗಿ ಕಾಣುವ ಕಡೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ, ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವ ಕೂಲಿ ಕಾರ್ಮಿಕರ ರಕ್ತ ಪರೀಕ್ಷೆ ಮಾಡಿ ನೋಡಿದಾಗ ಅವರಲ್ಲಿ ಮಲೇರಿಯಾ ಇರುವುದು ಕಂಡು ಬರುತ್ತಿದೆ, ಅವರಿಗೆ ಚಿಕಿತ್ಸೆ ನೀಡುವ ಮೂಲಕ ನೆರವಾಗುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಜವರೇಗೌಡ, ಡಾ.ಚಂದ್ರಶೇಖರ್‌, ಡಾ.ಮಂಜುನಾಥ್‌, ಡಾ.ಜಗದೀಶ್‌, ಡಾ.ಕಕ್ಕೀಲಯ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ ಸೇರಿದಂತೆ ಖಾಸಗಿ ವೈದ್ಯರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು ಭಾಗವಹಿಸಿದ್ದರು.