ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರಗಾಲ ಕಾಡುತ್ತಿದೆ. ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಅಲ್ಲದೇ, ಬೆಳೆಗಳಿಗೆ ಕೇವಲ ನಾಲ್ಕು ಕಟ್ಟು ನೀರನ್ನು ಮಾತ್ರ ಕೊಡುತ್ತೇವೆ ಎಂದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಇದ್ದರಿಂದ ವ್ಯವಸಾಯವನ್ನೇ ನಂಬಿದ್ದ ಜನರು ನಗರ ಪ್ರದೇಶಗಳ ವಲಸೆ ಹೊರಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಿಲ್ಲೆಯಲ್ಲಿ ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ 2000 ಕೋಟಿ ರು. ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಸಾಗಿದ ನೂರಾರು ಮಂದಿ ಕಾರ್ಯಕರ್ತರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಿಪಿಐಎಂನ ಮುಖಂಡ ಎನ್.ಎಲ್.ಭರತ್ ರಾಜ್ ಮಾತನಾಡಿ, ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬರಗಾಲ ಕಾಡುತ್ತಿದೆ. ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಅಲ್ಲದೇ, ಬೆಳೆಗಳಿಗೆ ಕೇವಲ ನಾಲ್ಕು ಕಟ್ಟು ನೀರನ್ನು ಮಾತ್ರ ಕೊಡುತ್ತೇವೆ ಎಂದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ಇದ್ದರಿಂದ ವ್ಯವಸಾಯವನ್ನೇ ನಂಬಿದ್ದ ಜನರು ನಗರ ಪ್ರದೇಶಗಳ ವಲಸೆ ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ರೈತರ ಬೆಳೆ ನಷ್ಟಕ್ಕೆ ಎಕರೆಗೆ 50 ಸಾವಿರ ಜೊತೆಗೆ ಕೂಲಿ ನಷ್ಟಕ್ಕೆ ಪರಿಹಾರ ನೀಡಬೇಕು. ಉದ್ಯೋಗ ಖಾತರಿ ಯೋಜನೆ ಅ ಕುಟುಂಬಕ್ಕೆ 200 ದಿನಗಳ ಕೂಲಿ ನೀಡಿ ದಿನಗೂಲಿ 700 ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ರೈತರ ಹಾಗೂ ಕೂಲಿಕಾರರ ಮೈಕ್ರೋಫೈನಾನ್ಸ್ ಸಾಲಮನ್ನಾ ಮಾಡಬೇಕು. ಕಾವೇರಿ ನೀರಿನ ಪರಹಾರಕ್ಕಾಗಿ 5000 ಕೋಟಿ ರು. ಶಾಶ್ವತ ಪರಿಹಾರ ನಿಧಿ ಸ್ಥಾಪಿಸುವ ಜೊತೆಗೆ ಶಾಶ್ವತ ಸಂಕಷ್ಟ ಸೂತ್ರ ರೂಪಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.ಮುಖಂಡ ಎನ್.ಲಿಂಗರಾಜಮೂರ್ತಿ ಮಾತನಾಡಿ, ಬರಪೀಡಿತ ಜಿಲ್ಲೆ ಘೋಷಣೆ ಕೇವಲ ಕಾಗದದ ಮೇಲೆ ಉಳಿಯದೆ ಅದಕ್ಕೆ ಪೂರಕವಾಗಿ ಪರಿಹಾರ ಕ್ರಮಗಳನ್ನು ತಕ್ಷಣದಿಂದಲೇ ಜಾರಿಗೊಳಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಿಲ್ಲೆಯ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಸುಶೀಲಾ, ಟಿ.ಎಚ್.ಆನಂದ್, ಮಹದೇವಮ್ಮ, ಗುರುಸ್ವಾಮಿ, ಎನ್.ಶಿವಕುಮಾರ್, ಪ್ರೇಮಾ, ಜಯಶೀಲ, ಎ.ಎಲ್.ಶಿವಕುಮಾರ್, ಟಿ.ಎಚ್.ಬಸವರಾಜು, ಸರೋಜಮ್ಮ, ಎಚ್.ಕೆ.ತಿಮ್ಮೇಗೌಡ, ಬಿ.ಎಂ.ಶಿವಮಲ್ಲಯ್ಯ ಪಾಲ್ಗೊಂಡಿದ್ದರು.