ಮಳವಳ್ಳಿ ಪುರಸಭೆ ಅಧ್ಯಕ್ಷರು ನೀಡಿದ್ದ ರಾಜೀನಾಮೆ ಅಂಗೀಕಾರ ಆಗದೆ ವಾಪಸ್..!

| Published : May 22 2025, 01:16 AM IST

ಮಳವಳ್ಳಿ ಪುರಸಭೆ ಅಧ್ಯಕ್ಷರು ನೀಡಿದ್ದ ರಾಜೀನಾಮೆ ಅಂಗೀಕಾರ ಆಗದೆ ವಾಪಸ್..!
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ನೀಡಿದ್ದ ರಾಜೀನಾಮೆಯನ್ನು 12 ದಿನವಾದರೂ ಅಂಗೀಕಾರ ಮಾಡದೇ ವಾಪಸ್ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇದ್ದೀಯಾ ಎನ್ನುವುದನ್ನು ಉಪವಿಭಾಗಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಪುರಸಭೆ ಸದಸ್ಯ ಟಿ.ನಂದಕುಮಾರ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ನೀಡಿದ್ದ ರಾಜೀನಾಮೆಯನ್ನು 12 ದಿನವಾದರೂ ಅಂಗೀಕಾರ ಮಾಡದೇ ವಾಪಸ್ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇದ್ದೀಯಾ ಎನ್ನುವುದನ್ನು ಉಪವಿಭಾಗಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಪುರಸಭೆ ಸದಸ್ಯ ಟಿ.ನಂದಕುಮಾರ್ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 8 ತಿಂಗಳ ಹಿಂದೆ ಜೆಡಿಎಸ್, ಬಿಜೆಪಿ ಮತ್ತು ಪಕ್ಷೇತರರು ಸೇರಿ ಮೈತ್ರಿಕೂಟ ರಚನೆ ಮಾಡಿಕೊಂಡು ಎಸ್ಸಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಪಕ್ಷೇತರ ಸದಸ್ಯ ಎನ್.ಬಸವರಾಜು ಅವರನ್ನು ಆಯ್ಕೆ ಮಾಡಲಾಗಿತ್ತು ಎಂದರು.

ಆ ವೇಳೆ ಮಾಡಿಕೊಂಡಿದ್ದ ಆತಂರಿಕ ಒಪ್ಪಂದಂತೆ ಏ.21ರಂದು ಪುಟ್ಟಸ್ವಾಮಿ ಮತ್ತು ಎನ್.ಬಸವರಾಜು ನೀಡಿದ್ದ ರಾಜೀನಾಮೆಯನ್ನು ಆನಂತರ ನಡೆದ ರಾಜಕೀಯ ಬೆಳವಣಿಗೆಯಿಂದ 9 ದಿನಕ್ಕೆ ಉಪಾಧ್ಯಕ್ಷ ಹಾಗೂ 12 ದಿನಗಳ ನಂತರ ಅಧ್ಯಕ್ಷ ರಾಜೀನಾಮೆ ವಾಪಸ್ ಪಡೆದಿದ್ದಾರೆ ಎಂದು ಆರೋಪಿಸಿದರು.

ರಾಜೀನಾಮೆ ಅಂಗೀಕಾರಕ್ಕೆ 10 ದಿನಗಳ ಅವಕಾಶವಿದೆ. ಆದರೆ, 12 ದಿನಕ್ಕೆ ಅಧ್ಯಕ್ಷ ಪುಟ್ಟಸ್ವಾಮಿ ನನಗೆ ಕೆಲವು ಬಲಿಷ್ಠ ಜಾತಿಗಳು ಕೊಲೆ ಬೆದರಿಕೆ ಹಾಕಿ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದವು ಎಂದು ಆರೋಪಿಸಿ ವಾಪಸ್ ಪಡೆದಿದ್ದಾರೆ ಎಂದು ದೂರಿದರು.

ಉಪವಿಭಾಗಾಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಆದರೆ, ಅದಕ್ಕೆ ಕಾನೂನಿನಲ್ಲಿ ಅವಕಾಶ ಇದ್ದೀಯಾ ಎನ್ನುವುದನ್ನು ಸ್ಪಷ್ಪಪಡಿಸಬೇಕು. ಅಲ್ಲದೇ, ಮುಂದಿನ ದಿನಗಳಲ್ಲಿ ಉಪವಿಭಾಗಾಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದರು.

ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಗೆ ನಾವೆಲ್ಲರೂ ಗೈರಾಗಲು ಮುಂದಾಗಿದ್ದನ್ನು ಅರಿತು ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಸದಸ್ಯರು ಕಡ್ಡಾಯವಾಗಿ ಸಭೆಗೆ ಹಾಜರಾಗುವಂತೆ ಮುಖಂಡರ ಮೂಲಕ ಸೂಚಿಸಿದ್ದರು. ಅಧ್ಯಕ್ಷ ಪುಟ್ಟಸ್ವಾಮಿ ಅವರು ರಾಜೀನಾಮೆ ನೀಡುವಂತೆ ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿ.ವೈ.ವಿಜಯೇಂದ್ರ ಅವರು ಸಹ ಜಿಲ್ಲಾ ಘಟಕದ ಅಧ್ಯಕ್ಷರ ಮೂಲಕ ಸೂಚಿಸಿದ್ದರೂ ಅವರು ರಾಜೀನಾಮೆ ನೀಡಿಲ್ಲ ಎಂದು ಆರೋಪಿಸಿದರು.

ಕಳೆದ 9 ದಿನಗಳ ಹಿಂದೆ 2ನೇ ಬಾರಿಗೆ ಉಪಾಧ್ಯಕ್ಷ ಎನ್.ಬಸವರಾಜು ನೀಡಿದ್ದ ರಾಜೀನಾಮೆಯನ್ನು ಬುಧವಾರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್ ನವರು ಕುತಂತ್ರದಿಂದ ಉಪಾಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಇಂಥ ಕೆಲಸಕ್ಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಸಿದ್ದರಾಜು, ಎಂ.ಟಿ.ಪ್ರಶಾಂತ್, ನಾಗೇಶ್, ಮುಖಂಡರಾದ ಪೊತ್ತಂಡೆ ನಾಗರಾಜು, ನಾರಾಯಣ ಇದ್ದರು.