ಸಾರಾಂಶ
ಹಬ್ಬದಲ್ಲಿ ಸಾವಿರಾರು ಮಂದಿ ಭಾಗಿಯಾಗುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದರ ಜೊತೆಗೆ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ತಳಗವಾದಿ ಗ್ರಾಮದಲ್ಲಿ 9 ವರ್ಷಕೊಮ್ಮೆ ನಡೆಯುವ ಗ್ರಾಮದೇವತೆ ಉಮಾಮಹೇಶ್ವರಿ ದೊಡ್ಡಹಬ್ಬಕ್ಕೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಸಂಪ್ರದಾಯಕ ವಿಧಿ- ವಿಧಾನಗಳೊಂದಿಗೆ ಚಾಲನೆ ದೊರೆಯಿತು.ಮಾ.6 ರಿಂದ ಮಾ.30 ರವರೆಗೆ ನಡೆಯುವ ದೊಡ್ಡಹಬ್ಬದ ಅಂಗವಾಗಿ ಗ್ರಾಮದ ಹೊರವಲಯದ ಹಿರಿಯಮ್ಮನ ದೇವಸ್ಥಾನದ ಬಳಿ ಗೌಡನಕಟ್ಟೆಯಿಂದ ಕಂಬ(ಬಾಳೆಗಿಡ)ವನ್ನು ಐವರು ಯುವಕರು ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು ಉಮಾಮಹೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರು.
ಅರ್ಚಕ ಚಿಕ್ಕಲಿಂಗಯ್ಯ ಹಾಗೂ ನಾಡಗೌಡ ಚಿಕ್ಕಹನುಮಯ್ಯ ನೇತೃತ್ವದಲ್ಲಿ ಮಾರಮ್ಮನ ಗುಡಿ ಬಳಿಯ ಕಂಬಕ್ಕೆ ಬಾಳೆಗಿಡವನ್ನು ಕಟ್ಟಿ ಪ್ರತಿ 9 ವರ್ಷಕ್ಕೊಮ್ಮೆ ನಡೆಯುವ ದೊಡ್ಡಹಬ್ಬಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ದೊಡ್ಡಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಉಮಾಮಹೇಶ್ವರಿ ದೇವಸ್ಥಾನದ ಆವರಣವನ್ನು ಶುಕ್ರವಾರ ಸ್ವಚ್ಛಗೊಳಿಸಿದರು.
ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸಿ.ಚೌಡಯ್ಯ ಮಾತನಾಡಿ, ಹಬ್ಬದಲ್ಲಿ ಸಾವಿರಾರು ಮಂದಿ ಭಾಗಿಯಾಗುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದರ ಜೊತೆಗೆ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು. ಗ್ರಾಪಂ ಸದಸ್ಯ ಟಿ.ಎಚ್.ಆನಂದ್, ಮುಖಂಡರಾದ ರೈತ ಸಂಘದ ಚೌಡಯ್ಯ, ದಿಲೀಪ್ ಕುಮಾರ್(ವಿಶ್ವ), ಚಂದ್ರಶೇಖರ್, ಎಸ್ ಡಿಎಂಸಿ ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಆಂಜನಪ್ಪ, ಹಿರಿಯ ವಿದ್ಯಾರ್ಥಿಗಳು, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ, ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.