ಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯಲ್ಲಿ ಜೋಳದ ರೊಟ್ಟಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಡೋಣಿ ನದಿ ತೀರದ ಪ್ರದೇಶದಲ್ಲಿ ಬೆಳೆಯುವ ಮಾಲ್ದಂಡಿ ಬಿಳಿ ಜೋಳ ತನ್ನ ಗುಣಮಟ್ಟ, ರುಚಿ ಹಾಗೂ ಪೌಷ್ಟಿಕ ಗುಣಗಳಿಂದ ವಿಶೇಷ ಹೆಗ್ಗಳಿಕೆ ಪಡೆದಿದೆ. ಇಂತಹ ವಿಶಿಷ್ಟ ಜೋಳಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ಗುರುತಿನೊಂದಿಗೆ ಭೌಗೋಳಿಕ ಸ್ಥಾನಮಾನ (ಜಿಐ-ಜಿಯೋಗ್ರಾಫಿಕಲ್ ಇಂಡಿಕೇಷನ್) ಕಲ್ಪಿಸಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಉತ್ತರ ಕರ್ನಾಟಕದ ಆಹಾರ ಸಂಸ್ಕೃತಿಯಲ್ಲಿ ಜೋಳದ ರೊಟ್ಟಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಡೋಣಿ ನದಿ ತೀರದ ಪ್ರದೇಶದಲ್ಲಿ ಬೆಳೆಯುವ ಮಾಲ್ದಂಡಿ ಬಿಳಿ ಜೋಳ ತನ್ನ ಗುಣಮಟ್ಟ, ರುಚಿ ಹಾಗೂ ಪೌಷ್ಟಿಕ ಗುಣಗಳಿಂದ ವಿಶೇಷ ಹೆಗ್ಗಳಿಕೆ ಪಡೆದಿದೆ. ಇಂತಹ ವಿಶಿಷ್ಟ ಜೋಳಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತ್ಯೇಕ ಗುರುತಿನೊಂದಿಗೆ ಭೌಗೋಳಿಕ ಸ್ಥಾನಮಾನ (ಜಿಐ-ಜಿಯೋಗ್ರಾಫಿಕಲ್ ಇಂಡಿಕೇಷನ್) ಕಲ್ಪಿಸಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.ಡೋಣಿ ನದಿ ತೀರದ ಮಣ್ಣಿನ ಗುಣಲಕ್ಷಣ, ಹವಾಮಾನ ಹಾಗೂ ಕೃಷಿ ಪದ್ಧತಿ ಕಾರಣದಿಂದ ಈ ಭಾಗದಲ್ಲಿ ಬೆಳೆಯುವ ಮಾಲ್ದಂಡಿ ಬಿಳಿ ಜೋಳಕ್ಕೆ ವಿಶಿಷ್ಟ ಗುಣಮಟ್ಟವಿದೆ. ಈ ಜೋಳದಿಂದ ತಯಾರಿಸುವ ರೊಟ್ಟಿ ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾಗಿದ್ದು, ಸ್ಥಳೀಯ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಇಂಡಿ ಲಿಂಬೆ, ಬ್ಯಾಡಗಿ ಮೆಣಸಿನಕಾಯಿಯ ಮಾದರಿಯಲ್ಲಿ ಡೋಣಿ ತೀರದ ಮಾಲ್ದಂಡಿ ಜೋಳಕ್ಕೂ ಭೌಗೋಳಿಕ ಸ್ಥಾನ ದೊರೆಯಬೇಕೆಂಬುದು ರೈತರ ಹಾಗೂ ಈ ಭಾಗದ ಜನರ ಆಶಯ.57 ಗ್ರಾಮಗಳ ಮಣ್ಣಿನ ಪರೀಕ್ಷೆ:ಡೋಣಿ ನದಿ ತೀರದ ಜೋಳದ ಭೌಗೋಳಿಕ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನಿಗಳ ತಂಡ ಮಹತ್ವದ ಅಧ್ಯಯನ ನಡೆಸಿದೆ. ಡೋಣಿ ನದಿ ತೀರದ ವ್ಯಾಪ್ತಿಯ ಸುಮಾರು 57 ಗ್ರಾಮಗಳ ಮಣ್ಣಿನ ಮಾದರಿ ಸಂಗ್ರಹಿಸಿ ಪರಿಶೀಲಿಸಲಾಗಿದೆ. ಈ ಭಾಗದ ಮಣ್ಣಿನ ಗುಣಧರ್ಮ, ಜೋಳದ ಉತ್ಪಾದನೆ ಹಾಗೂ ಗುಣಮಟ್ಟದ ಕುರಿತು ವೈಜ್ಞಾನಿಕ ಅಧ್ಯಯನಕ್ಕೆ ಒತ್ತು ನೀಡಲಾಗಿದೆ. ಜೋಳದ ವಿಶೇಷ ಆಹಾರ ಗುಣಮಟ್ಟ ಹಾಗೂ ಬೀಜದ ಗುಣಲಕ್ಷಣಗಳ ಕುರಿತು ಹೆಚ್ಚಿನ ಪರೀಕ್ಷೆ ನಡೆಸುವ ಉದ್ದೇಶದಿಂದ ಮಾದರಿಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿದೆ. ಆದರೆ ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ಪರೀಕ್ಷಾ ಕಾರ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.ವಿಶ್ವವಿದ್ಯಾಲಯದಿಂದ ಸಹಕಾರದ ಭರವಸೆ:ಮಾಲ್ದಂಡಿ ಜೋಳಕ್ಕೆ ಭೌಗೋಳಿಕ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಅಗತ್ಯವಿರುವ ಎಲ್ಲ ರೀತಿಯ ತಾಂತ್ರಿಕ ಹಾಗೂ ವೈಜ್ಞಾನಿಕ ಸಹಕಾರ ನೀಡಲು ಸಿದ್ಧರಿದ್ದಾರೆ. ಆದರೆ ಸಂಬಂಧಿಸಿದ ಏಜೆನ್ಸಿ ಮಟ್ಟದಲ್ಲಿ ವಿಳಂಬವಾಗುತ್ತಿರುವುದರಿಂದ ಮುಂದಿನ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಸಿದ ಏಜೆನ್ಸಿ ಮುಂದಿನ ಪರೀಕ್ಷೆ ಹಾಗೂ ವರದಿ ಪ್ರಕ್ರಿಯೆಗೆ ಆಸಕ್ತಿ ತೋರಿದರೆ ಈಗಾಗಲೇ ಸಂಗ್ರಹಿಸಿರುವ ಮಣ್ಣಿನ ಮಾದರಿಗಳ ಪರಿಶೀಲನೆ ಮತ್ತು ಲಭ್ಯವಿರುವ ವರದಿಗಳ ಆಧಾರದಲ್ಲಿ ಮಾಲ್ದಂಡಿ ಜೋಳಕ್ಕೆ ಭೌಗೋಳಿಕ ಸ್ಥಾನಮಾನದ ಮಾನ್ಯತೆ ಹಾಗೂ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವ ಸಲ್ಲಿಸಲು ಅವಕಾಶವಿದೆ ಎಂಬುದು ಕೃಷಿ ತಜ್ಞರ ಅಭಿಮತ.ಪ್ರಾಧಿಕಾರ ಸ್ಥಾಪನೆಯಾದರೆ ರೈತರಿಗೆ ಅನುಕೂಲ:ಡೋಣಿ ತೀರದ ಮಾಲ್ದಂಡಿ ಬಿಳಿ ಜೋಳಕ್ಕೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆಯಾದರೆ ಈ ಭಾಗದ ರೈತರಿಗೆ ಹಲವು ರೀತಿಯಲ್ಲಿ ಅನುಕೂಲವಾಗಬಹುದು. ಜೋಳದ ಗುಣಮಟ್ಟದ ಸಂರಕ್ಷಣೆ, ಉತ್ತಮ ಬೀಜಗಳ ಅಭಿವೃದ್ಧಿ, ವೈಜ್ಞಾನಿಕ ಕೃಷಿ ಪದ್ಧತಿ, ಸಂಶೋಧನೆ, ಮೌಲ್ಯವರ್ಧನೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ರೈತರಿಗೆ ಸೂಕ್ತ ಬೆಲೆ ದೊರಕಿಸಲು ನೆರವಾಗಬಹುದು. ವಿಜಯಪುರ ಡೋಣಿ ನದಿ ತೀರದ ಪ್ರದೇಶದಲ್ಲಿ ಬೆಳೆಯುವ ಮಾಲ್ದಂಡಿ ಬಿಳಿ ಜೋಳವು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ವಿಶೇಷತೆಗೆ ಹೆಸರುವಾಸಿಯಾಗಿದೆ. ಇಂಡಿ ಲಿಂಬೆ, ಬ್ಯಾಡಗಿ ಮೆಣಸಿನಕಾಯಿಯ ಮಾದರಿಯಲ್ಲಿ. ಮಾಲ್ದಂಡಿ ಬಿಳಿ ಜೋಳದ ಹೆಸರಿನಲ್ಲಿ ಪ್ರತ್ಯೇಕ ನಿಗಮ ಸ್ಥಾಪನೆಯಾದರೇ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಆದಷ್ಟು ಶೀಘ್ರದಲ್ಲಿ ನಿಗಮ ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿಗಳು, ಕೃಷಿ ಸಚಿವರು, ಉಸ್ತುವಾರಿ ಸಚಿವರ ಮೇಲೆ ಒತ್ತಡ ತರಲಾಗುವುದು. -ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಶಾಸಕರು, ದೇವರಹಿಪ್ಪರಗಿ.ವಿಜಯಪುರ ದೋಣಿ ತೀರದ ಮಾಲ್ದಂಡಿ ಜೋಳದಿಂದ ತಯಾರಿಸಿದ ಬಿಸಿರೊಟ್ಟಿ ಅತ್ಯಂತ ಮೃದು, ಬಲು ರುಚಿ. ಖಡಕ್ ರೊಟ್ಟಿಯೂ ಹೆಚ್ಚು ದಿನ ಹಾಳಾಗಲ್ಲ. ದಿನ ಕಳೆದಂತೆಲ್ಲ ರುಚಿ ಗುಣಮಟ್ಟ ಹೆಚ್ಚಾಗುತ್ತದೆ. ಈ ವಿಶೇಷ ಗುಣದಿಂದಲೇ ಮಾಲ್ದಂಡಿ ಜೋಳಕ್ಕೆ ಬೇಡಿಕೆ ಇದೆ. ಜೋಳದ ಬೀಜಕ್ಕೆ ಹಾಗೂ ಜಾನುವಾರುಗಳಿಗೆ ಈ ಜೋಳದ ಮೇವಿಗೂ ರಾಜ್ಯ, ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು. ಸಾರ್ವಜನಿಕರಲ್ಲಿ ಜೋಳದ ವಿಶೇಷತೆ ಕುರಿತು ಮನೆಯಿಂದಲೇ ಬದಲಾವಣೆ ಬರಬೇಕಾಗಿದೆ. ಈ ಭಾಗದ ಜೋಳಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಬೇಕು.-ಡಾ.ಎಸ್.ಎಸ್.ಕರಭಂಟನಾಳ,
ಕೃಷಿ ಸಂಶೋಧನಾ ಕೇಂದ್ರ, ಜೋಳ ಅಭಿವೃದ್ಧಿ ಯೋಜನೆಯ ಪ್ರಧಾನ ವಿಜ್ಞಾನಿ.ಡೋಣಿ ತೀರದ ಮಾಲ್ದಂಡಿ ಬಿಳಿ ಜೋಳದ ವಿಶೇಷತೆಯನ್ನು ವೈಜ್ಞಾನಿಕವಾಗಿ ಗುರುತಿಸಿ ಅದಕ್ಕೆ ಪ್ರತ್ಯೇಕ ಮಾನ್ಯತೆ ಕಲ್ಪಿಸುವ ಪ್ರಯತ್ನಕ್ಕೆ ವಿಶ್ವವಿದ್ಯಾಲಯದಿಂದ ಅಗತ್ಯವಿರುವ ಎಲ್ಲ ರೀತಿಯ ತಾಂತ್ರಿಕ ಹಾಗೂ ವೈಜ್ಞಾನಿಕ ಸಹಕಾರ ನೀಡಲು ಸಿದ್ಧರಿದ್ದೇವೆ. ಆಹಾರ ಗುಣಮಟ್ಟ ಮತ್ತು ಬೀಜದ ಗುಣಲಕ್ಷಣಗಳ ಪರೀಕ್ಷೆ ಸೇರಿದಂತೆ ಅಗತ್ಯ ಅಧ್ಯಯನಗಳನ್ನು ಕೈಗೊಳ್ಳಬೇಕಿದೆ. ಸದ್ಯ ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ಕೆಲವು ಪರೀಕ್ಷಾ ಕಾರ್ಯಗಳು ತಾತ್ಕಾಲಿಕವಾಗಿ ವಿಳಂಬವಾಗಿವೆ. ಸಂಬಂಧಿಸಿದ ಏಜೆನ್ಸಿ ಮುಂದಿನ ಪ್ರಕ್ರಿಯೆಗೆ ಮುಂದಾದರೆ ಲಭ್ಯವಿರುವ ಅಧ್ಯಯನ ವರದಿಗಳ ಆಧಾರದಲ್ಲಿ ವಿಶೇಷ ಸ್ಥಾನಮಾನ ಹಾಗೂ ನಿಗಮ ಸ್ಥಾಪನೆಯ ಪ್ರಸ್ತಾವನೆಗೆ ಸಹಕಾರ ನೀಡಬಹುದು.- ಸಜ್ಜನವರ.ಜಿ, ಉಪಕುಲಪತಿಗಳು ಕೃಷಿ ವಿಶ್ವವಿದ್ಯಾಲಯ ವಿಜಯಪುರ.ಡೋಣಿ ನದಿ ತೀರದ ಸುಮಾರು 57 ಗ್ರಾಮಗಳ ಮಣ್ಣಿನ ಗುಣ ಧರ್ಮ, ರೊಟ್ಟಿಯ ರುಚಿ, ಉತ್ತಮ ಆರೋಗ್ಯಕ್ಕೆ ಬೇಕಾದ ವಿವಿಧ ಪೋಷಕಾಂಶ ಜೋಳದಲ್ಲಿದೆ. ಈ ಕುರಿತು ಕೃಷಿ ಇಲಾಖೆ ಹಾಗೂ ವಿಜ್ಞಾನಿಗಳು ಜಂಟಿಯಾಗಿ ಅಗತ್ಯ ಇರುವ ವೈಜ್ಞಾನಿಕ ವರದಿ ಮತ್ತು ಮಣ್ಣಿನ ಮಾದರಿಗಳನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ ಮಾಡಲಾಗಿದ್ದು. ಸರ್ಕಾರಕ್ಕೆ ಮಾಲ್ದಂಡಿ ಬಿಳಿ ಜೋಳಕ್ಕೆ ವಿಶೇಷ ಸ್ಥಾನ ನೀಡಲು ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವು ಸಭೆ ನಡೆದಿದೆ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.-ಶಿವನಗೌಡ ಪಾಟೀಲ,
ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ವಿಜಯಪುರ.