ಮೇಲ್ನೋಟಕ್ಕೆ ಆನೆಯ ಹೊಟ್ಟೆ, ಮುಖ ಮತ್ತು ಹಿಂಭಾಗದಲ್ಲಿ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಎತ್ತರದ ಪ್ರದೇಶದಲ್ಲಿ ಮತ್ತೊಂದು ಗಂಡಾನೆಯೊಂದಿಗೆ ನಡೆದ ಕಾದಾಟದ ವೇಳೆ ಗಾಯಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ. ಪಾಳ್ಯ ವಲಯದಲ್ಲಿ ಮದಗಜಗಳ ನಡುವಿನ ಕಾದಾಟದಲ್ಲಿ ತೀವ್ರ ಗಾಯಗೊಂಡ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ.ಪಿ.ಜಿ. ಪಾಳ್ಯ ವಲಯದ ಹುತ್ತೂರು ಶಾಖೆಯ ಅರಣ್ಯ ಸಿಬ್ಬಂದಿ ಹೂಗ್ಯಂ ವಲಯ ವ್ಯಾಪ್ತಿಯ ಕೊಪ್ಪ ಗಡಿ ಭಾಗದ ಕಳ್ಳರಕೋಬೆ ಹಳ್ಳದ ಸಮೀಪ ಗಸ್ತು ತಿರುಗುತ್ತಿದ್ದ ವೇಳೆ ಈ ಕಳೇಬರ ಪತ್ತೆ ಮಾಡಿದ್ದಾರೆ. ಕೂಡಲೇ ಗಸ್ತು ಸಿಬ್ಬಂದಿ ವಲಯ ಅರಣ್ಯಾಧಿಕಾರಿ ಪುಟ್ಟರಾಜು ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ಮೇಲ್ನೋಟಕ್ಕೆ ಆನೆಯ ಹೊಟ್ಟೆ, ಮುಖ ಮತ್ತು ಹಿಂಭಾಗದಲ್ಲಿ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಎತ್ತರದ ಪ್ರದೇಶದಲ್ಲಿ ಮತ್ತೊಂದು ಗಂಡಾನೆಯೊಂದಿಗೆ ನಡೆದ ಕಾದಾಟದ ವೇಳೆ ಗಾಯಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ನಂತರ ನಿಖರ ಸಾವಿನ ಕಾರಣ ತಿಳಿದುಬರಲಿದೆ.
ಮರಣೋತ್ತರ ಪರೀಕ್ಷೆಯ ನಂತರ ಅರಣ್ಯ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಆರ್ ಎಫ್ ಒ ಪುಟ್ಟರಾಜು ಮಾಹಿತಿ ನೀಡಿದ್ದಾರೆ.