ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಸುಕ್ಷೇತ್ರ ಮಾಲೆಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಮಹಾ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವೋಪೇತವಾಗಿ ಜರುಗಿತು.ಮುಗಿಲು ಮುಟ್ಟಿದ ಗೋವಿಂದ ನಾಮಸ್ಮರಣೆಯೊಂದಿಗೆ ಮೋಡ ಕವಿದ ವಾತಾವರಣ, ತುಂತುರು ಮಳೆಯ ನಡುವೆಯೂ ಮುಂಜಾನೆಯಿಂದಲೇ ದೇವಾಲಯದ ಕಡೆಗೆ ಆಗಮಿಸಿದ ಅಪಾರ ಭಕ್ತರ ದಂಡಿನಲ್ಲಿ ಬಹುತೇಕರು ಬೆಟ್ಟದ ತಪ್ಪಲಿನಲ್ಲಿರುವ ದೇವಾಲಯದಲ್ಲಿ, ವೈಕುಂಠ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಶ್ರೀ ದೇವಿ ಸಮೇತನಾದ ಗೋವಿಂದರಾಜ ಸ್ವಾಮಿಯ ದರ್ಶನ ಪಡೆದರೆ ಮತ್ತೆ ಕೆಲವು ಭಕ್ತರು ಕಡಿದಾದ ಬೆಟ್ಟವನೇರಿ ಪದ್ಮಾವತಿ ಸಮೇತನಾಗಿ ನೆಲೆಸಿರುವ ವೆಂಕಟರಮಣ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಆಷಾಢಮಾಸದ ದ್ವಾದಶಿಯಂದು ನಡೆಯುವ ಏಕೈಕ ಜಾತ್ರಾ ಮಹೋತ್ಸವ ಇದಾಗಿರುವುದರಿಂದ ನಾಡಿನ ವಿವಿಧ ಕಡೆಗಳಿಂದ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತರು ಆಗಮಿಸುವುದು ವಾಡಿಕೆ. ಅದರಲ್ಲೂ ವಿಶೇಷವಾಗಿ ನೂತನ ವಧು-ವರರು ಬೆಟ್ಟದ ಮೇಲೆ ನೆಲೆಸಿರುವ ಪದ್ಮಾವತಿ ಸಮೇತನಾದ ವೆಂಕಟರಮಣನ ದರ್ಶನ ಮಾಡಿ, ನಂತರ ರಥೋತ್ಸವದಲ್ಲಿ ಪಾಲ್ಗೊಂಡರೆ, ಮನದ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದಿರಂದ ಇಲ್ಲಿನ ರಥೋತ್ಸವದಲ್ಲಿ ನೂತನ ವಧುವರರು ಹೆಚ್ಚಾಗಿ ಕಾಣುವುದು ವಿಶೇಷ.ಮಧ್ಯಾಹ್ನ ೧.೩೦ರ ಸುಮಾರಿಗೆ ತುಂತುರು ಮಳೆಯ ನಡುವೆಯೂ ಸಿಂಗರಿಸಿದ ರಥದ ಮಂಟಪದಲ್ಲಿ ಶ್ರೀದೇವಿ ಭೂದೇವಿ ಸಮೇತನಾದ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಮಹಾ ಮಂಗಳಾರತಿ ಬೆಳಗುತ್ತಿದ್ದಂತೆಯೇ ಈ ಶುಭ ಘಳಿಗೆಗಾಗಿ ಕಾಯುತ್ತಿದ್ದ ಭಕ್ತವೃಂದ, ಗೋವಿಂದ ನಾಮಸ್ಮರಣೆಯೊಂದಿಗೆ ರಥ ಎಳೆದ ಧನ್ಯತಾ ಭಾವದೊಂದಿಗೆ ಭಕ್ತಿಪರವಶರಾದರು.
ರಥೋತ್ಸವ ವೇಳೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಮುಜರಾಯಿ ಇಲಾಖೆ ಅಧಿಕಾರಿಗಳು ಆದ ತಹಸೀಲ್ದಾರ್ ಸಂತೋಷ್ ಕುಮಾರ್ ಸೇರಿದಂತೆ ದೇವಾಲಯದ ವ್ಯವಸ್ಥಾಪನಾ ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು.ಪ್ರತಿ ವರ್ಷದಂತೆ ಈ ವರ್ಷವೂ ಸಹ ದೇವಾಂಗ ಸಮಾಜ,ಬ್ರಾಹ್ಮಣ ಸಮಾಜ, ಈಡಿಗ ಸಮಾಜ, ಆರ್ಯವೈಶ್ಯ ಸಮಾಜ ಸೇರಿದಂತೆ ಕೆಲವು ಸಂಘ ಸಂಸ್ಥೆಗಳ ವತಿಯಿಂದ ಉತ್ಸವದಲ್ಲಿ ಭಾಗಿಯಾಗಿದ್ದ ಜನರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. ನಗರದ ೪ ಕಿಮೀ ದೂರದಲ್ಲಿರುವ ಮಾಲೇಕಲ್ ತಿರುಪತಿ ಸುಕ್ಷೇತ್ರಕ್ಕೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಹೋಗಿ ಬರಲು ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.* ಹೇಳಿಕೆ:
ಮಾಲೇಕಲ್ ತಿರುಪತಿ ಕ್ಷೇತ್ರವನ್ನು ಆಂಧ್ರದ ದೊಡ್ಡ ತಿರುಪತಿ ಮಾದರಿ ಅಭಿವೃದ್ಧಿಪಡಿಸಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ. ರಾಜಗೋಪುರ ಕಾಮಗಾರಿ ಮುಗಿದಿದ್ದು, ಮುಂದಿನ ನವೆಂಬರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವರನ್ನು ಇಲ್ಲಿಗೆ ಕರೆಸಿ ಲೋಕಾರ್ಪಣೆ ಮಾಡಲಾಗುವುದು.- ಕೆ.ಎಂ.ಶಿವಲಿಂಗೇಗೌಡ, ಶಾಸಕ