ಸಾರಾಂಶ
ಮಲೆನಾಡು ಮಿತ್ರವೃಂದಿಂದ ಗಾಯಕಿ ಬಿ.ಕೆ.ಸುಮಿತ್ರಾ ಅವರಿಗೆ ‘ಮಲೆನಾಡು ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿರಿಯ ಗಾಯಕಿ ಬಿ.ಕೆ.ಸುಮಿತ್ರಾ ಅವರಿಗೆ ಮಲೆನಾಡು ಮಿತ್ರವೃಂದ ಕೊಡ ಮಾಡುವ ‘ಮಲೆನಾಡು ಮಿತ್ರ-2025’ ಪ್ರಶಸ್ತಿ ಹಾಗೂ ಉದ್ಯಮಿ ಅಚ್ಯುತ್ ಗೌಡ, ಶಿಕ್ಷಣ ಕ್ಷೇತ್ರದಲ್ಲಿ ರಿತುಪರ್ಣ, ಕೃಷಿ ಕ್ಷೇತ್ರದಲ್ಲಿ ಮಹ್ಮದ್ ಅಮಾನುಲ್ಲಾ ‘ಮಲೆನಾಡು ಸಾಧಕ’ಪ್ರಶಸ್ತಿ ನೀಡಿ ಗೌರವಿಸಲಾಯಿತು.ಭಾನುವಾರ ನಗರದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಲೆನಾಡು ಭಾಗದವರು ರಾಜಕೀಯ ಮೀರಿ ಒಂದಾಗಿರಬೇಕು. ರಾಜಕೀಯದಲ್ಲಿ ಅನಿವಾರ್ಯ ಕಾರಣದಿಂದ ದೂಷಣೆ ಅನಿವಾರ್ಯ. ಆದರೆ, ನಾವೆಲ್ಲ ಒಂದಾಗಿ ಕಷ್ಟದಿಂದ ಬಂದು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಅಗತ್ಯ ಎಂದರು.
ಶಾಸಕ ಆಗರ ಜ್ಞಾನೇಂದ್ರ ಮಾತನಾಡಿ, ಬೆಂಗಳೂರಿನಲ್ಲಿ ಮಲೆನಾಡಿಗರೆಲ್ಲ ಎಲ್ಲ ಸೇರಿರುವುದು ವಿಶೇಷ. ಒಬ್ಬರಿಗೊಬ್ಬರು ಸ್ಪಂದಿಸುತ್ತ ಸಾಧನೆ ಮಾಡಿದವರನ್ನು ಅಭಿನಂದಿಸುವ, ಸಮಸ್ಯೆಯಲ್ಲಿ ಇದ್ದವರ ಕೈ ಹಿಡಿಯುವ ಕೆಲಸ ಮಾಡೋಣ ಎಂದರು.ಶಾಸಕ ಕೆ. ಗೋಪಾಲಯ್ಯ, ಮಲೆನಾಡು ಮಿತ್ರ ಅಧ್ಯಕ್ಷ ಪ್ರದೀಪ್ ಹೆಗ್ಗೋಡ್, ಕಾರ್ಯದರ್ಶಿ ಸಂದೇಶ್ ಹಂದಿಗೋಡ್, ಸುಕೇಶ್ ಸೇರಿ ಇತರರಿದ್ದರು.
ಬೆಂಗಳೂರಿನಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಸೊರಬ ಸೇರಿ ಮಲೆನಾಡಿನ ಹಲವು ಭಾಗದ ಜನರಿದ್ದೇವೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಹಲವರು ನಮ್ಮ ನಡುವೆ ಇದ್ದಾರೆ. ಸಾಧಕರನ್ನು ಪ್ರೋತ್ಸಾಹಿಸುವುದು ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಈ ರೀತಿಯಲ್ಲಿ ಸಾಧಕರಿಗೆ ಸನ್ಮಾನಿಸುವ ಕೆಲಸ ಮಾಡಬೇಕಿದೆ ಎಂದರು.