ವಿರೋಧ ಪಕ್ಷವನ್ನು ಮಟ್ಟಹಾಕುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ದ್ವೇಷ ಭಾಷಣ ಕುರಿತ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿರೋಧ ಪಕ್ಷವನ್ನು ಮಟ್ಟಹಾಕುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ದ್ವೇಷ ಭಾಷಣ ಕುರಿತ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ -2025ಕ್ಕೆ ಅಂಕಿತ ಹಾಕದೆ ರಾಷ್ಟ್ರಪತಿಗೆ ವರ್ಗಾಯಿಸಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ನಡೆಯನ್ನು ಸ್ವಾಗತಿಸಿದ ವಿಜಯೇಂದ್ರ, ವಿರೋಧ ಪಕ್ಷವನ್ನು ಮಟ್ಟಹಾಕಲೆಂದೇ ಈ ಕಾಯ್ದೆಯನ್ನು ರೂಪಿಸಲಾಗಿದೆ. ಈ ಮಸೂದೆ ಮೂಲಕ ಸರ್ಕಾರ ವಿಪಕ್ಷದ ಧ್ವನಿ ಅಡಗಿಸುವ ಕೆಲಸ ಮಾಡಲು ಹೊರಟಿದೆ. ಸದನದಲ್ಲಿ ಯಾವ ಚರ್ಚೆಗೂ ಇದನ್ನು ಒಳಪಡಿಸಲಿಲ್ಲ. ಪ್ರಜಾಪ್ರಭುತ್ವಕ್ಕೆ ಇದು ಮಾರಕವಾದ ಕಾಯ್ದೆ. ಈಗಾಗಲೇ ಹಿಂದೂ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು.ಇದು ಸುಧಾರಣೆಯ ಬಜೆಟ್‌: ಇದೇ ವೇಳೆ, ಕೇಂದ್ರ ಸರ್ಕಾರದ ಬಜೆಟ್‌ನ್ನು ಸ್ವಾಗತಿಸಿದ ವಿಜಯೇಂದ್ರ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 9ನೇ ಬಜೆಟ್ ವಿಕಸಿತ ಭಾರತದ ಕನಸನ್ನು ನನಸು ಮಾಡುವತ್ತ ಸಾಗಿದೆ. ಇದು ಅಭಿವೃದ್ಧಿ ಪೂರಕ ಬಜೆಟ್ ಎಂದು ಹೇಳಿದರು.ಪ್ರಧಾನಿ ಮೋದಿಯವರು 2047ಕ್ಕೆ ವಿಕಸಿತ ಭಾರತದ ಸಂಕಲ್ಪ ಮಾಡಿದ್ದಾರೆ. ಆ ಸಂಕಲ್ಪಕ್ಕೆ ಕೇಂದ್ರದ ಬಜೆಟ್ ಪೂರಕವಾಗಿದೆ. ಇದು ಆಡಂಬರದ ಬಜೆಟ್ ಅಲ್ಲ, ಸುಧಾರಣೆಯ ಬಜೆಟ್. ಜನಪ್ರಿಯತೆಗಿಂತ ಜನಹಿತದ ಬಜೆಟ್ ಆಗಿದೆ. ಪ್ರಸ್ತುತ ಜಾಗತಿಕ ಮಟ್ಟದ ಪರಿಸ್ಥಿತಿಯಲ್ಲಿ ಭಾರತದ ವಿರುದ್ಧ ಅಮೆರಿಕ ಸಾರಿರುವ ಸುಂಕ ಸಮರಕ್ಕೆ ಇದು ಉತ್ತರ ನೀಡಲಿದೆ ಎಂದರು.

ಈ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಐಟಿ-ಬಿಟಿ, ಕೃಷಿ, ರೈಲು, ವಿಮಾನ, ರಸ್ತೆ...ಹೀಗೆ ಎಲ್ಲಾ ಆದ್ಯತಾ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಲಾಗಿದ್ದು, ಇದೊಂದು ಆರ್ಥಿಕ ಶಿಸ್ತಿನ ಬಜೆಟ್ ಆಗಿದೆ. ಈ ಬಜೆಟ್‌ನಲ್ಲಿ ಹಣಕಾಸು ಕೊರತೆಯನ್ನು ಶೇ.4.4ಕ್ಕೆ ತರಲಾಗಿದೆ. ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮೂಲಭೂತ ಸೌಲಭ್ಯಗಳಿಗೆ 2 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಈಗ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು 12.20 ಲಕ್ಷ ಕೋಟಿಗೆ ಏರಿಸಲಾಗಿದೆ. ಹಾಗಾಗಿ, ಇದೊಂದು ಕ್ರಾಂತಿಕಾರಕ ಬಜೆಟ್ ಆಗಿದೆ ಎಂದರು.