ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಸ್ಥಳಿಯ ಪುರಸಭೆ ಅಧ್ಯಕ್ಷರಾಗಿ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ, ಉಪಾಧ್ಯಕ್ಷರಾಗಿ ಲಕ್ಷ್ಮೀ ಈರಪ್ಪ ಮಜ್ಜಿಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಚನ್ನಮಲ್ಲಪ್ಪ ಘಂಟಿ ತಿಳಿಸಿದರು.ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಿಸಿದರು.
ನೂತನ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ ಮಾತನಾಡಿ, ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ಎಲ್ಲರ ಸಹಕಾರ ಅಗತ್ಯ ಎಂದರು.ಬಿಜೆಪಿ ಬೆಂಬಲಿತ ಸದಸ್ಯ ಭೀಮನಗೌಡ ಮೇಟಿ ಮಾತನಾಡಿ, ಸ್ಪಷ್ಟ ಬಹುಮತದ ಕೊರತೆ ಹಿನ್ನೆಲೆಯಲ್ಲಿ ಪುರಸಭೆಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾಳ್ಗೊಳ್ಳದೆ ಅಭಿವೃದ್ಧಿಗಾಗಿ ಸಹಕರಿಸಲಾಗಿದೆ ಎಂದು ಹೇಳಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಸಮಸ್ಯೆ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಗೆ ಗ್ರಹಣ ಹಿಡಿದಿದ್ದು ಪಟ್ಟಣದ ಅಭಿವೃದ್ಧಿಗಾಗಿ ರಾಜಕಾರಣ ಮಾಡದೆ ಸಹಕರಿಸಲಾಗಿದೆ ಎಂದರು.
*ಫಲಿಸದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪ್ರಭಾವ ಬೀರಿದ್ದರೂ ಸಹಿತ ಸ್ಥಳೀಯ ಹಂತದಲ್ಲಿ ಮೈತ್ರಿಧರ್ಮ ಅನುಷ್ಠಾನಗೊಳ್ಳದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಜೆಡಿಎಸ್ ಪಕ್ಷದ ಶಾಸಕಿ ಆಗಿರುವ ಕರೆಮ್ಮ ಗೋಪಾಲಕೃಷ್ಣ ನಾಯಕ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸುವ ಅವಕಾಶ ಹೆಚ್ಚಾಗಿದ್ದವು. ಆದರೆ ಅವರ ಇಚ್ಛಾಶಕ್ತಿ ಕೊರತೆ, ನಿರಾಸಕ್ತಿ, ಬಿಜೆಪಿಗರ ಸ್ಪಂದನೆ ಸಿಗದಿರುವ ಕಾರಣ ಪುರಸಭೆ ಅಧಿಕಾರ ಕಾಂಗ್ರೆಸ್ಸಿಗರ ಪಾಲಾಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚಿತವಾಗಿದೆ.