ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ದಲಿತರ ದೌರ್ಜನ್ಯ ತಡೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿರುವ ಕಾರಣ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕೂಡಲೇ ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡುವ ಜೊತೆಗೆ ಕರ್ತವ್ಯ ಲೋಪದ ವಿರುದ್ಧ ತನಿಖೆ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯನ್ವಯ, ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ದಲಿತರ ಕುಂದುಕೊರತೆ ಸಭೆಯನ್ನು ನಡೆಸಬೇಕು. ಆದರೆ, ಇದುವರೆಗೆ ಅವರು ಯಾವುದೇ ಸಭೆಯನ್ನು ನಡೆಸಿಲ್ಲ ಎಂದು ದೂರಿದರು.ದಲಿತರ ಮೇಲೆ ಹಲ್ಲೆ ಮಾಡುತ್ತಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಆದೇಶಿಸಿದ್ದರೂ ಜಿಲ್ಲಾಧಿಕಾರಿ ಕ್ರಮ ಜರುಗಿಸಿಲ್ಲ. ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಇದುವರೆಗೂ ಚಿಕಿತ್ಸಾ ವೆಚ್ಚ ಹಾಗೂ ಸರ್ಕಾರದಿಂದ ಸಲ್ಲಬೇಕಾದ ಪರಿಹಾರ ಸಲ್ಲಿಸಿಲ್ಲ. ಸರ್ಕಾರದ ಆದೇಶ ಇದ್ದರೂ ಜಿಲ್ಲಾಧಿಕಾರಿ ಕ್ರಮ ವಹಿಸದೆ ನಿರ್ಲಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಕಪುರ ತಾಲೂಕು ಕ್ರೈಂ ಕ್ಯಾಪಿಟಲ್ ಆಗಿದೆ. ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೇ ರೀತಿ ಚನ್ನಪಟ್ಟಣದಲ್ಲೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿದ್ದು, ಜಿಲ್ಲಾಧಿಕಾರಿ ಗೂಂಡಾಕಾಯಿದೆಯನ್ನು ಏಕೆ ಜಾರಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಜನ್ಮದಿನಾಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ವಹಿಸಬೇಕಿತ್ತು. ಆದರೆ, ಜಿಲ್ಲಾಧಿಕಾರಿ ಗೈರು ಹಾಜರಾಗುವ ಮೂಲಕ ಈ ಇಬ್ಬರು ಮಹಾನ್ ನಾಯಕರಿಗೆ ಅಗೌರವ ತೋರಿದ್ದಾರೆ ಎಂದು ಮಲ್ಲಿಕಾರ್ಜುನ ಟೀಕಿಸಿದರು.ಬಾಕ್ಸ್.............
ಶಾಶ್ವತ ದೌರ್ಜನ್ಯ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ಪದೇಪದೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ. ಕೆಲ ತಿಂಗಳ ಹಿಂದೆ ಅನೀಶ್ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಗುಂಪು ಗ್ರಾಮದಲ್ಲಿ ಸಾಗರ್ ಎಂಬ ದಲಿತ ಯುವಕನ ಮೇಲೂ ಗಂಭೀರ ಹಲ್ಲೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಮಳಗಾಳು ಗ್ರಾಮವನ್ನು ದಲಿತರ ಮೇಲಿನ ಶಾಶ್ವತ ದೌರ್ಜನ್ಯ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಮಲ್ಲಿಕಾರ್ಜುನ್ ಒತ್ತಾಯಿಸಿದರು.(ಮಗ್‌ಶಾಟ್ ಫೋಟೊ ಬಳಸಿ)
27ಕೆಆರ್ ಎಂಎನ್ 5.ಜೆಪಿಜಿಧಮ್ಮದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.