ಮಲ್ಲಿಕಾರ್ಜುನ ಖರ್ಗೆ ಪಿಎಂ ಆಗಬಹುದು: ರಾಯರಡ್ಡಿ ಭವಿಷ್ಯ

| Published : Jul 22 2025, 01:15 AM IST

ಸಾರಾಂಶ

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಧೀಮಂತ ನಾಯಕ. ಅವರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಹೇಳುತ್ತಿದ್ದಾರೆ. ಗಾಂಧಿ ಮನೆತನ ಅಧಿಕಾರ ತ್ಯಾಗಕ್ಕೆ ಹೆಸರಾಗಿದೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಪ್ರಧಾನಿ ಸ್ಥಾನ ತ್ಯಾಗ ಮಾಡಿದಂತೆ, ರಾಹುಲ್ ಗಾಂಧಿಯೂ ತ್ಯಾಗ ಮಾಡಿದರೆ ನಿಸ್ಸಂದೇಹವಾಗಿ ಖರ್ಗೆ ಅವರು ಪ್ರಧಾನಿಯಾಗುತ್ತಾರೆ.

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿಗರು ವ್ಯಂಗ್ಯವಾಡುತ್ತಿದ್ದಾರೆ. ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ವ್ಯಂಗ್ಯವೇ ಸತ್ಯವಾದರೂ ಅಚ್ಚರಿಯಿಲ್ಲ. ಖರ್ಗೆ ಅವರು ಪ್ರಧಾನಿಯಾಗಬಹುದು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಭವಿಷ್ಯ ನುಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 75 ವರ್ಷ ಮೀರಿದವರು ರಾಜಕೀಯ ನಿವೃತ್ತಿಯಾಗಬೇಕು ಎಂದು ಆರ್‌ಎಸ್‌ಎಸ್‌ ಮುಖಂಡ ಮೋಹನ ಭಾಗವತ್ ಅವರು ಇತ್ತೀಚಿಗೆ ಹೇಳಿದ್ದಾರೆ. ಬರುವ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ಪೂರ್ಣಗೊಳ್ಳಲಿವೆ. ಹೀಗಾಗಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದರೆ, ಆಗ ಜೆಡಿಯು ಹಾಗೂ ಟಿಡಿಪಿ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚಿದೆ. ಆಗ ಕಾಂಗ್ರೆಸ್ ನೇತೃತ್ವದಲ್ಲಿ ಇತರ ಪಕ್ಷಗಳು ಸೇರಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಅವಕಾಶವುಂಟು. ಹಾಗೊಂದು ವೇಳೆ ಸರ್ಕಾರ ರಚಿಸಿದರೆ ಖರ್ಗೆ ಅವರು ಪ್ರಧಾನಿಯಾಗಬಹುದು ಎಂದರು.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಧೀಮಂತ ನಾಯಕ. ಅವರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಹೇಳುತ್ತಿದ್ದಾರೆ. ಗಾಂಧಿ ಮನೆತನ ಅಧಿಕಾರ ತ್ಯಾಗಕ್ಕೆ ಹೆಸರಾಗಿದೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಪ್ರಧಾನಿ ಸ್ಥಾನ ತ್ಯಾಗ ಮಾಡಿದಂತೆ, ರಾಹುಲ್ ಗಾಂಧಿಯೂ ತ್ಯಾಗ ಮಾಡಿದರೆ ನಿಸ್ಸಂದೇಹವಾಗಿ ಖರ್ಗೆ ಅವರು ಪ್ರಧಾನಿಯಾಗುತ್ತಾರೆ ಎಂದರು.

ಸಿಎಂ ಬದಲಾಗಲ್ಲ: ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದೆವರಿಯುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ, ಸಾಧನಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾ‌ರ್ ಅವರ ಹೆಸರು ಪ್ರಸ್ತಾಪಿಸಿಲ್ಲ ಎನ್ನುವ ಚಿಲ್ಲರೆ ಆರೋಪಗಳಲ್ಲೇ ವಿರೋಧ ಪಕ್ಷದ ನಾಯಕರು ಕಾಲ ಕಳೆಯುತ್ತಿದ್ದಾರೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಕುರಿತು ಮಾತನಾಡಲು ಸಾಕಷ್ಟು ವಿಷಯಗಳಿವೆ ಎಂದು ರಾಯರಡ್ಡಿ ಕಿಡಿಕಾರಿದರು.

ಮುಖ್ಯಮಂತ್ರಿ ಬದಲಾವಣೆಯನ್ನು ಶಾಸಕರು ಮಾಡಬೇಕು. ಇಲ್ಲವೇ ಹೈಕಮಾಂಡ್‌ ಮಾಡಬೇಕು. ಅದು ಬಿಟ್ಟು ಬೇರೆ ಯಾರು ಮಾಡಲು ಬರಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.