ಸಾರಾಂಶ
ನಗರದ ಹಿರೇಮಠದ ಮಲ್ಲಿಕಾರ್ಜುನಸ್ವಾಮಿಯ ಪುನ: ಪ್ರತಿಷ್ಠಾಪನಾ ಮಹೋತ್ಸವ, ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉದ್ಘಾಟನೆ ಹಾಗೂ ಧಾರ್ಮಿಕ ಮಹಾಸಭೆ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಹಿರೇಮಠದ ಮಲ್ಲಿಕಾರ್ಜುನಸ್ವಾಮಿಯ ಪುನ: ಪ್ರತಿಷ್ಠಾಪನಾ ಮಹೋತ್ಸವ, ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉದ್ಘಾಟನೆ ಹಾಗೂ ಧಾರ್ಮಿಕ ಮಹಾಸಭೆ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಹಿರೇಮಠದ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಗುರುವಾರ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇದರ ಅಂಗವಾಗಿ ಈ ತಿಂಗಳ 25ರವರೆಗೆ ನಡೆಯುವ ಕಾರ್ಯಕ್ರಮಗಳ ವಿವರ ನೀಡಿದರು. 23ರಂದು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಷಟ್‌ಸ್ಥಳ ಧ್ವಜಾರೋಹಣ ನೆರವೇರಿಸಿ, ಗಂಗಾಪೂಜೆ, ಅಗ್ರೋದಕ, ಗೋಪೂಜೆ, ಮಹಾಗಣಪತಿ ಪೂಜೆ, ಸವತ್ಸಧೇನುಸಹಿತ ದೇವಾಲಯ ಪ್ರವೇಶ, ಸ್ವಸ್ತಿ ಪುಣ್ಯಾಹ, ದೇವನಾಂದಿ, ಅಂಕುರಾರೋಪಣ ಪೂಜೆ ನೆರವೇರಿಸಿದರು.
24 ರ ಶನಿವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಕಳಶ, ಸಪ್ತಸಭಾ, ದಶದಿಕ್ಪಾಲಕರು, ಏಕಾದಶರುದ್ರರು, ದ್ವಾದಶಾದಿತ್ಯರು, ಸಪ್ತಚಿರಂಜೀವಿಗಳು, ಸಪ್ತಮಾತೃಕಾ, ಅಧಿದೇವತಾ ಸಹಿತ ಆದಿತ್ಯಾದಿ ನವಗ್ರಹ, ಮೃತ್ಯುಂಜಯ, ಉಮಾಮಹೇಶ್ವರ, ಲಕ್ಷಿನಾರಾಯಣ, ಪ್ರಧಾನ ಮಲ್ಲಿಕಾರ್ಜುನಸ್ವಾಮಿಯ ಕಲಶಾರಾಧನೆ ಏರ್ಪಡಿಸಲಾಗಿದೆ. ಸಂಜೆ ಯಾಗಶಾಲಾ ಪ್ರವೇಶದೊಂದಿಗೆ ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಮಹಾರುದ್ರ ಹೋಮ, ಕಳಾಹೋಮ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಹೇಳಿದರು.25ರ ಭಾನುವಾರ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಅಮೃತಾಸ್ತದಿಂದ ಮಲ್ಲಿಕಾರ್ಜುನಸ್ವಾಮಿ, ನಂದೀಶ್ವರ ಸ್ವಾಮಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠಾಪನೆ, ನೇತ್ರೋನ್ಮೀಲನ ಮತ್ತು ಗೋಪುರ ಕಲಶಾರೋಹಣ, ಕುಂಭಾಭಿಷೇಕ, ನಂತರ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ, ಜಯಾದಿ ಹೋಮಗಳು, ನಂತರ ಮಹಾಪೂರ್ಣಾಹುತಿ, ರಾಜೋಪಚಾರಸಹಿತ ಮಹಾಮಂಗಳಾರತಿ ನೆರವೇರಲಿದೆ. ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ವಿವಿಧ ಸಮಾಜಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.