ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕು

| Published : Jan 22 2025, 12:32 AM IST

ಸಾರಾಂಶ

ಸದನದಲ್ಲಿ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ನೆನಗುದಿಗೆ ಬಿದ್ದಿದ್ದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು, ಮೂರು ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. ಕೊಣನೂರು ಹೋಬಳಿಯ ಕೆಸವತ್ತೂರು ಗ್ರಾಮದ ಬಳಿಯಿಂದ 70 ಕೋಟಿ ರು. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಲಿದ್ದು, 80 ಕಿ.ಮೀ. ವ್ಯಾಪ್ತಿಯ 53 ಕೆರೆ ಮತ್ತು 30 ಕಟ್ಟೆಗಳಿಗೆ ನೀರು ಹರಿಯಲಿದೆ. ಎರಡನೇ ಹಂತದ ಕಾಮಗಾರಿಯ ಪ್ರಸ್ತಾವನೆಯ ಅನುಮೋದನೆಗಾಗಿ ಕಾವೇರಿ ನೀರಾವರಿ ನಿಗಮದ ಬೋರ್ಡ್‌ ಸಭೆಯಲ್ಲಿ ಮಂಡನೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಸದನದಲ್ಲಿ ಸರ್ಕಾರದ ಗಮನ ಸೆಳೆದ ಹಿನ್ನೆಲೆಯಲ್ಲಿ ನೆನಗುದಿಗೆ ಬಿದ್ದಿದ್ದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು, ಮೂರು ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.

ಸೋಮವಾರಪೇಟೆ ತಾಲೂಕು ಕಟ್ಟೇಪುರ ಬಳಿ ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 190 ಕೋಟಿ ರು. ವೆಚ್ಚದ ಈ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಯಲ್ಲಿ ತಾಲೂಕಿನ ಮಲ್ಲಿಪಟ್ಟಣ, ದೊಡ್ಡಮಗ್ಗೆ, ಕೊಣನೂರು ಹೋಬಳಿಗಳ 79 ಗ್ರಾಮಗಳ 150 ಕೆರೆ ಹಾಗೂ 50 ಕಟ್ಟೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಕಟ್ಟೇಪುರ ಬಳಿ ಹೇಮಾವತಿ ಹಿನ್ನೀರಿನಿಂದ 120 ದಿನಗಳ ಕಾಲ ನೀರೆತ್ತಿ ಕೆರೆ, ಕಟ್ಟೆಗಳಿಗೆ ನೀರು ಹರಿಸಲಾಗುವುದು. ವಿದ್ಯುತ್ ಪವರ್‌ ಸ್ಟೇಷನ್ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದೆ. ಸರ್ಕಾರಿ ಜಮೀನು ಸ್ವಲ್ಪ ಭಾಗ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮುಸವತ್ತೂರು ಗ್ರಾಮದ ಬಳಿ ನಿರ್ಮಿಸಿರುವ ನೀರಿನ ಟ್ಯಾಂಕ್‌ವರೆಗೆ 10.1 ಕಿಮೀ ಮುಖ್ಯ ಕೊಳವೆ (ರೈಸಿಂಗ್ ಮೈನ್) ಹಾದು ಹೋಗಿದ್ದು 5.5 ಕಿ. ಮೀ. ಕೊಳವೆ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. 77 ಕಿ.ಮೀ. ವಿತರಣಾ ಕೊಳವೆಗಳನ್ನು ಅಳವಡಿಸಲಾಗಿದೆ. ಕೊಳವೆ ಅಳವಡಿಕೆಗೆ ರೈತರಿಂದ ವಶಪಡಿಸಿಕೊಂಡಿದ್ದ 11.30 ಎಕರೆ ಪ್ರದೇಶಕ್ಕೆ 9 ಕೋಟಿ ರು. ಪರಿಹಾರ ವಿತರಿಸಲಾಗಿದೆ. ಯೋಜನೆಯ ಕಾಮಗಾರಿ ವಿಳಂಬ ಕುರಿತು ತಾವು ಸದನದಲ್ಲಿ ಪ್ರಸ್ತಾಪಿಸಿದ್ದು, ಕಾಮಗಾರಿಗೆ ಅಗತ್ಯವಾದ ಹಣ ಬಿಡುಗಡೆ ಮಾಡಿ ಚುರುಕುಗೊಳಿಸಲಾಗಿದೆ ಎಂದರು.

ಕೊಣನೂರು ಹೋಬಳಿಯ ಕೆಸವತ್ತೂರು ಗ್ರಾಮದ ಬಳಿಯಿಂದ 70 ಕೋಟಿ ರು. ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಲಿದ್ದು, 80 ಕಿ.ಮೀ. ವ್ಯಾಪ್ತಿಯ 53 ಕೆರೆ ಮತ್ತು 30 ಕಟ್ಟೆಗಳಿಗೆ ನೀರು ಹರಿಯಲಿದೆ. ಎರಡನೇ ಹಂತದ ಕಾಮಗಾರಿಯ ಪ್ರಸ್ತಾವನೆಯ ಅನುಮೋದನೆಗಾಗಿ ಕಾವೇರಿ ನೀರಾವರಿ ನಿಗಮದ ಬೋರ್ಡ್‌ ಸಭೆಯಲ್ಲಿ ಮಂಡನೆ ಮಾಡಲಾಗಿದೆ. ಮೂರು ಹೋಬಳಿಗಳ ಕೆರೆಕಟ್ಟೆಗಳಿಗೆ ನೀರು ಹರಿಯುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಕೆರೆಕಟ್ಟೆಗಳು ತುಂಬುವುದರಿಂದ ಕೊಳವೆ ಬಾವಿಗಳು ಕೂಡ ಮರುಪೂರಣಗೊಳ್ಳಲಿದ್ದು ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿದೆ ಎಂದರು.

ರಾಮನಾಥಪುರ ಹಾರಂಗಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಉದಯ್ ಇದ್ದರು.