ದೀಪಾವಳಿ ಬಟ್ಟೆ ಖರೀದಿಗೆ ಹುಬ್ಬಳ್ಳಿಯ ಮಾಲ್‌ಗಳಲ್ಲಿ ಆಫರ್‌ಗಳ ಅಬ್ಬರ

| Published : Oct 17 2025, 01:01 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶಾಪಿಂಗ್‌ ಮಾಲ್‌ಗಳಲ್ಲಿ ವ್ಯಾಪಾರದ ಅಬ್ಬರ ಜೋರಾಗಿದ್ದು, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬೈಒನ್‌ ಗೆಟ್ ಒನ್‌ ಹೆಸರಿನಲ್ಲಿ ಆಕರ್ಷಕ ಆಫರ್‌ಗಳನ್ನು ನೀಡುತ್ತಾ ಸಹಸ್ರಾರು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಶಿವಾನಂದ ಅಂಗಡಿಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶಾಪಿಂಗ್‌ ಮಾಲ್‌ಗಳಲ್ಲಿ ವ್ಯಾಪಾರದ ಅಬ್ಬರ ಜೋರಾಗಿದ್ದು, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬೈಒನ್‌ ಗೆಟ್ ಒನ್‌ ಹೆಸರಿನಲ್ಲಿ ಆಕರ್ಷಕ ಆಫರ್‌ಗಳನ್ನು ನೀಡುತ್ತಾ ಸಹಸ್ರಾರು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಹುಬ್ಬಳ್ಳಿಯಲ್ಲಿ ಸಾಕಷ್ಟು ಶಾಪಿಂಗ್‌ ಮಾಲ್‌ಗಳಿದ್ದರೂ ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಅರ್ಬನ್‌ ಓಯಾಸಿಸ್‌ ಮಾಲ್‌ ಪಕ್ಕದಲ್ಲಿ ತಿಂಗಳೊಪ್ಪತ್ತಿನಲ್ಲಿ ಮಾಂಗಳ್ಯ, ಸೌಥ್ ಇಂಡಿಯಾ ಎಂಬ ಹೆಸರಿನ ಬಹುದೊಡ್ಡ ಬಟ್ಟೆ ಮಳಿಗೆಗಳು ಆರಂಭವಾಗಿದ್ದು, ಹಬ್ಬದ ಹಿನ್ನೆಲೆಯಲ್ಲಿ ಆಫರ್‌ಗಳ ಮೇಲೆ ಆಫರ್‌ ಜತೆ ಗ್ರಾಹಕರಿಗೆ ಸಾವಿರ ರು. ಖರೀದಿ ಮೇಲೆ ಆಕರ್ಷಕ ಗಿಫ್ಟಗಳನ್ನು ಕೊಡುತ್ತಿದ್ದು, ಮಾಲ್‌ಗಳ ಆವರಣ ಸೇರಿ ಗೋಕುಲ ರಸ್ತೆಯೇ ಸಹಸ್ರಾರು ಗ್ರಾಹಕರಿಂದ ಗಿಜಿಗುಡುತ್ತಿದೆ.

ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ತೆಲಂಗಾಣ ಮೂಲದ ಮಾಂಗಳ್ಯ ಬಟ್ಟೆ ಮಳಿಗೆಗೆ ದಿನಕ್ಕೆ 4ರಿಂದ 5 ಸಾವಿರ ಗ್ರಾಹಕರು ಭೇಟಿ ನೀಡಿದ್ದಾರೆ. ಮಾಲ್‌ ಆರಂಭದ ವೇಳೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿಸಿಕೊಂಡು ಸುತ್ತ 60 ಕಿಲೋ ಮೀಟರ್‌ ವರೆಗೆ ನಾವು ಜಾಹೀರಾತುಗಳನ್ನು ಕೊಟ್ಟು ಪ್ರಚಾರ ಮಾಡಿದ್ದೇವೆ. ಪ್ರಚಾರಕ್ಕಾಗಿಯೇ 8ರಿಂದ 10ಜನರಿರುವ ತಂಡಗಳನ್ನು ಕಟ್ಟಿ ಬಟ್ಟೆ ಮಳಿಗೆಯೇ ಆಫರ್‌ಗಳನ್ನು ಸೇರಿ ಬಟ್ಟೆಯ ಗುಣಮಟ್ಟ ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸಿದ್ದೇವೆ ಎನ್ನುತ್ತಾರೆ ಮಳಿಗೆಯೇ ಸಿಬ್ಬಂದಿ.

ಉತ್ತರ ಕರ್ನಾಟಕದಲ್ಲಿ ಬಡ, ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಕುಟುಂಬದ ಯುವಕರು, ಯುವತಿಯರು, ಗೃಹಿಣಿಯರು, ಮಕ್ಕಳನ್ನು ಆಕರ್ಷಿಸಲು ನಾವು ಆಫರ್‌ಗಳನ್ನು ಕೊಟ್ಟಿದ್ದೇವೆ. ನಮ್ಮ ಮಳಿಗೆಯಲ್ಲಿ ₹ 555ರಲ್ಲಿ 4 ಸೀರೆ, ₹ 1000 ದಲ್ಲಿ ನಾಲ್ಕು ಜೀನ್ಸ ಪ್ಯಾಂಟ್‌, ₹ 1000ಗೆ 5 ಶರ್ಟ್‌ ಕೊಟ್ಟಿದ್ದೇವೆ. ಇಂಥ ಆಫರ್‌ಗಳು ಎಲ್ಲಿ ಸಿಗುತ್ತವೆ. ಮೇಲಾಗಿ ಖರೀದಿ ಮೇಲೆ ಗ್ರಾಹಕರಿಗೆ ಗಿಫ್ಟ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ ಮಳಿಗೆಯೇ ವ್ಯವಸ್ಥಾಪಕರು.

ಸೌಥ್ ಇಂಡಿಯಾ ಮಳಿಗೆ

ಬುಧವಾರವಷ್ಟೇ ಸೌಥ್‌ ಇಂಡಿಯಾ ಹೆಸರಿನ ಆಂಧ್ರದ ಬಟ್ಟೆ ಮಳಿಗೆ ಗೋಕುಲ ರಸ್ತೆಯಲ್ಲಿ ಆರಂಭವಾಗಿದೆ. ಮೊದಲ ದಿನವೇ ಮಳಿಗೆ 8ರಿಂದ 10 ಸಾವಿರ ಜನ ಮಳಿಗೆಗೆ ಭೇಟಿ ನೀಡಿದ್ದಾರೆ. ಹಬ್ಬಕ್ಕೆ ದಿನಗಣನೆ ಆರಂಭವಾಗಿರುವುದರಿಂದ ಲಕ್ಷಾಂತರ ಗ್ರಾಹಕರು ಆಗಮಿಸುವ ವಿಶ್ವಾಸವಿದೆ ಎನ್ನುತ್ತಾರೆ ಸಿಬ್ಬಂದಿ. ಗುರುವಾರವೂ ಸಹ ಮಳಿಗೆಗೆ ಬೆಳಗ್ಗೆಯಿಂದಲೇ ಸಹಸ್ರಾರು ಗ್ರಾಹಕರು ಭೇಟಿ ನೀಡಿದ್ದರು. ಆಫರ್‌ಗಳ ಹಿನ್ನೆಲೆಯಲ್ಲಿ ಎರಡೆರಡು ಕಡೆ ಭೇಟಿ ನೀಡಿ ತಮಗೆ ಬೇಕಾದ ಬಟ್ಟೆಗಳನ್ನು ಪರಿಶೀಲಿಸಿ ಕೊಂಡುಕೊಳ್ಳುತ್ತಿದ್ದಾರೆ.

600ರಿಂದ 700 ಜನರಿಗೆ ಉದ್ಯೋಗ!

ಮಾಂಗಳ್ಯ ಹಾಗೂ ಸೌಥ್‌ ಇಂಡಿಯಾ ಬಟ್ಟೆ ಮಳಿಗೆಗಳು ಹುಬ್ಬಳ್ಳಿ ಸೇರಿ ಸುತ್ತಮುತ್ತಲಿನ ಹಳ್ಳಿಗಳ 600ರಿಂದ 700 ಮಹಿಳೆಯರು, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದು, ಅವರೆಲ್ಲಾ ಇಲ್ಲಿ ಕೆಲಸಕ್ಕೆ ಸೇರಿ ಖುಷಿ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮಳಿಗೆಗೆ ಇನ್ನಷ್ಟು ಶಕ್ತಿ ಬರುತ್ತದೆ ಹೀಗಾಗಿ ಇನ್ನು ಕೆಲಸಕ್ಕೆ ಬರುವವರಿಗೆ ಮುಕ್ತ ಅವಕಾಶಗಳಿವೆ ಎನ್ನುತ್ತಾರೆ ಸಿಬ್ಬಂದಿ.

ನಮ್ಮ ಶಾಂಪಿಂಗ್‌ ಮಾಲ್‌ ಆರಂಭವಾಗಿ ತಿಂಗಳು ಪೂರ್ತಿಯಾಗಿದೆ. ದಿನಕ್ಕೆ 4ರಿಂದ 5 ಸಾವಿರ ಜನರು ಮಾಲ್‌ಗೆ ಭೇಟಿ ನೀಡಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟುಕೊಂಡು ನಮ್ಮಲ್ಲಿ ಆಫರ್‌ಗಳನ್ನು ಕೊಟ್ಟಿದ್ದೇವೆ. ಹೀಗಾಗಿ ದೀಪಾವಳಿ ಹಬ್ಬದ ಬಟ್ಟೆ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಬರುತ್ತಿದ್ದಾರೆ ಎಂದು ಹೇಳುತ್ತಾರೆ ಮಾಂಗಳ್ಯ ಶಾಂಪಿಂಗ್‌ ಮಾಲ್‌ ಮ್ಯಾನೇಜರ್‌ ಅಶ್ವಿನ್ ಕಾಮತ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿಯೇ ಎರಡೆರಡು ಶಾಂಪಿಂಗ್‌ ಮಾಲ್‌ಗಳು ಆರಂಭಗೊಂಡಿರುವುದು ಸಂತಸ ಮೂಡಿಸಿದೆ. ಹಬ್ಬದ ಬಟ್ಟೆ ಖರೀದಿಗಾಗಿ ನಾನು ಈ ಬಾರಿ ಮಾಂಗಳ್ಯ ಮತ್ತು ಸೌತ್‌ ಇಂಡಿಯಾ ಶಾಂಪಿಂಗ್‌ ಮಾಲ್‌ಗೆ ಭೇಟಿ ನೀಡಿದ್ದು, ಆಫರ್‌ಗಳ ಹಿನ್ನೆಲೆಯಲ್ಲಿ ಬಟ್ಟೆ ಖರೀದಿ ವೇಳೆ ಉಳಿತಾಯವಾಗಿದೆ ಎಂದು ಗ್ರಾಹಕಿ ಗೀತಾ ಹೇಳಿದರು.