ಸಾರಾಂಶ
ದರಿಯಾ ಬಹದ್ದೂರ್ ಘಡ ಹಾಗೂ ಮಾಲ್ತಿ ದ್ವೀಪಗಳಲ್ಲಿರುವ ಪ್ರಾಕೃತಿಕ ಸೌಂದರ್ಯ ಸೊಬಗು ಪ್ರವಾಸಿಗರನ್ನು ಮನಸೂರೆಗೊಳಿಸುತ್ತವೆ. ಆದ್ದರಿಂದ ಈ ಸೌಂದರ್ಯವನ್ನು ಉಳಿಸಿಕೊಂಡು ಪ್ರವಾಸಿಗರನ್ನು ಇಲ್ಲಿ ಆಕರ್ಷಿಸಲು ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಲ್ಪೆ ಪಡುಕೆರೆ ಸಮೀಪದಲ್ಲಿರುವ ದರಿಯಾ ಬಹದ್ದೂರ್ ಘಡ ಹಾಗೂ ಮಾಲ್ತಿ ದ್ವೀಪಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದರಿಯಾ ಬಹದ್ದೂರ್ ಘಡ ಹಾಗೂ ಮಾಲ್ತಿ ದ್ವೀಪಗಳಲ್ಲಿರುವ ಪ್ರಾಕೃತಿಕ ಸೌಂದರ್ಯ ಸೊಬಗು ಪ್ರವಾಸಿಗರನ್ನು ಮನಸೂರೆಗೊಳಿಸುತ್ತವೆ. ಆದ್ದರಿಂದ ಈ ಸೌಂದರ್ಯವನ್ನು ಉಳಿಸಿಕೊಂಡು ಪ್ರವಾಸಿಗರನ್ನು ಇಲ್ಲಿ ಆಕರ್ಷಿಸಲು ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು.ಸೋಮೇಶ್ವರ ಕಡಲ ತೀರದಲ್ಲಿ ಪ್ರವಾಸಿಗರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳನ್ನು ಆಧುನಿಕತೆಯ ಸ್ವರೂಪದೊಂದಿಗೆ ಜನಾಕರ್ಷಣೀಯವಾಗಿ ಕೈಗೊಳ್ಳಬೇಕು. ಪ್ರವಾಸಿಗರಿಗೆ ವಾಹನಗಳ ಪಾಕಿಂಗ್ ವ್ಯವಸ್ಥೆ, ಆಸನದ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
ತ್ರಾಸಿ ಬೀಚಿನ ನಿರ್ವಹಣೆ ಹಾಗೂ ಜಲ ಸಾಹಸ ಚಟುವಟಿಕೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಟೆಂಡರ್ ಕರೆಯಲಾಗಿದ್ದು, ಯಾವುದೇ ಅಭ್ಯರ್ಥಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವುದು ಕಂಡುಬಂದಿದೆ. ಕೆಲವು ಗುತ್ತಿಗೆದಾರರು ಕಡಲ ತೀರ ಹಾಗೂ ನದಿಯಲ್ಲಿಯೂ ಜಲಸಾಹಸ ಚಟುವಟಿಕೆ ಕೈಗೊಳ್ಳಲು ಹಾಗೂ ಪಾರ್ಕಿಂಗ್ ವ್ಯವಸ್ಥೆ ಸ್ಥಳ ಬದಲಾವಣೆ ಸೇರಿದಂತೆ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲು ಕೋರಿರುತ್ತಾರೆ. ಇವುಗಳನ್ನು ಪರಿಶೀಲಿಸಿ, ಸೂಕ್ತ ವ್ಯವಸ್ಥೆ ಸೇರಿದಂತೆ ಜಲಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಮೂರನೇ ವ್ಯಕ್ತಿಗಳ ವಿಮಾ ಸೌಲಭ್ಯವನ್ನು ಕಲ್ಪಿಸಲು ಸಹ ಷರತ್ತು ವಿಧಿಸಬೇಕು. ತ್ರಾಸಿ ಬೀಚ್ ಪಕ್ಕದ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ದಾರೀದೀಪ ಅಳವಡಿಸಬೇಕು ಎಂದು ಹೇಳಿದರು.ಮಲ್ಪೆ ಬೀಚ್ ಪ್ರದೇಶಗಳಲ್ಲಿ ವ್ಯಾಪಾರ ಮಾಡುವ ಅಂಗಡಿಗಳು, ಕಾಟೇಜ್ ಸೇರಿದಂತೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ನೀಡಲಾದ ಸ್ಥಳದ ಬಾಡಿಗೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದರು.ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹಾಗೂ ಬೈಂದೂರು ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ. ಯು., ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.