ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಸಂಪನ್ನ

| Published : Apr 16 2024, 01:03 AM IST

ಸಾರಾಂಶ

ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಸಂಪನ್ನಗೊಂಡಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವದ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವ್ರತದಲ್ಲಿದ್ದರು. ವಾರದ ನಂತರ ದೇವಾಲಯದಲ್ಲಿ ವ್ರತಾಚರಣೆಯ ಅಂಗವಾಗಿ ವಿಶೇಷ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಗ್ರಾಮಗಳ ಪುರುಷರು ದೇವಾಲಯದ ಆವರಣದಲ್ಲಿ ರಾತ್ರಿಯ ವೇಳೆ ತಂಗುವ ಮೂಲಕ ದೇವಾಲಯದಲ್ಲಿ ಚೌರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಅರ್ಪಿಸುತ್ತಿದ್ದಾರೆ.

ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆ ತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರಾದಾಯಿಕ ಕೊಡವರ ಉಡುಪು ಕುಪ್ಯ್ಪಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸುವುದು. ನಂತರ ಗ್ರಾಮದ ಜನತೆಯಿಂದ ಈಡು ಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ನಂತರ ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.

ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ ಶರ್ಮ ನೆರವೇರಿಸಿದರು. ಸುತ್ತ ಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.