ಸಾರಾಂಶ
ಶಿಗ್ಗಾಂವಿ ತಾಲೂಕಿನ ಬಂಕಾಪುರ ಪುರಸಭೆಗೆ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪುರಸಭೆಗೆ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್‌ನ ಮಮತಾ ಯಲ್ಲಪ್ಪ ಮಾಗಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಆಂಜನೇಯ ಗುಡಗೇರಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಂತೋಷ ಹಿರೇಮಠ ಘೋಷಣೆಯನ್ನು ಮಾಡಿದರು.ಪುರಸಭೆಯು ೨೩ ಸದಸ್ಯರ ಬಲವನ್ನು ಹೊಂದಿದ್ದು, ಕಾಂಗ್ರೆಸ್‌ನ ೧೪ ಜನ ಸದಸ್ಯರಿದ್ದರೆ, ಬಿಜೆಪಿಯ ೮ ಜನ ಸದಸ್ಯರು, ಓರ್ವ ಪಕ್ಷೇತರ ಸದಸ್ಯರು ಕೂಡಾ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮೀಸಲಾತಿ ಇದ್ದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಲತಾ ಸುಂಕದ ಮತ್ತು ಕಾಂಗ್ರೆಸ್ ಮಮತಾ ಮಾಗಿ ಮತ್ತು ನಜೀಮಾಭಾನು ದರ್ಜೆ ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನದ ಅವಧಿ ವೇಳೆಗೆ ರಂಗೇರಿದ ವಾತಾವರಣದಲ್ಲಿ ಕಾಂಗ್ರೆಸ್‌ನ ನಜೀಮಾಭಾನು ದರ್ಜೆ ಚುನಾವಣೆಯಿಂದ ದೂರ ಉಳಿದರು,
ಚುನಾವಣಾ ಸಂದರ್ಭದಲ್ಲಿ ಕಣದಲ್ಲಿ ಉಳಿದ ಮಮತಾ ಮಾಗಿ ಮತ್ತು ಲತಾ ಎಲ್ಲಪ್ಪ ಸುಂಕದ ಉಪಸ್ಥಿತರಿದ್ದ ಸದಸ್ಯರಲ್ಲಿ ಕೈ ಎತ್ತುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಮಮತಾ ಮಾಗಿ ೧೧ ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರೆ ಲತಾ ಯಲ್ಲಪ್ಪ ಸುಂಕದ ೮ ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ಸಿನ ನಾಲ್ಕು ಸದಸ್ಯರಾದ ಮಮ್ಮಧಗೌಸ್ ಗುಲ್ಮೀ, ನಜೀಮಾಭಾನು ದರ್ಜೆ, ಶಕೀಲಾಬೇಗಂ ಮುಲ್ಲಾ, ಶಮ್‌ಶಾದಬಾನು ದಾಣೇಭಾಗ ಚುನಾವಣೆಯಿಂದ ದೂರ ಉಳಿದು ಗೈರು ಹಾಜರಿ ಇದ್ದುದ್ದು ಆಶ್ಚರ್ಯಕ್ಕೆ ಕಾರಣವಾಗಿತ್ತು.ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ವಿಪ ಮಾಜಿ ಸದಸ್ಯ ಹಾಗೂ ಗಡಿಪ್ರಾಧಿಕಾರ ನಿಗಮದ ಅಧ್ಯಕ್ಷ ಸೋಮಣ್ಣಾ ಬೇವಿನಮರದ, ಕೆಪಿಸಿಸಿ ಸದಸ್ಯ ಯಾಸೀರಖಾನ್ ಪಠಾಣ, ಮಹಾಂತೇಶ ಸಾಲಿ, ಮಂಜುನಾಥ ಮಣ್ಣನವರ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.