ಸಾರಾಂಶ
ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಒಂದಾದ ಮಾಮ್ಕೋಸ್ (ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ)ನ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಆಯ್ಕೆಯ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲ ಅಭ್ಯರ್ಥಿಗಳು ಗೆಲುವಿನ ಮತ ಪಡೆದಿದ್ದು, ಈ ಸಂಸ್ಥೆಯಲ್ಲಿ ಸಹಕಾರ ಭಾರತಿ ಸಂಘಟನೆ ಸತತವಾಗಿ ಐದನೇ ಬಾರಿಗೆ ಭರ್ಜರಿ ಜಯ ಸಾಧಿಸಿದೆ.
ಬಿಜೆಪಿ ಅಡಿಯಲ್ಲಿ ರಚಿತವಾದ ಸಹಕಾರ ಭಾರತಿ ಸಂಘಟನೆಯನ್ನು ಚುನಾವಣೆಯಲ್ಲಿ ಗಟ್ಟಿಯಾಗಿ ಎದುರಿಸಿ ಅಧಿಕಾರ ಪಡೆಯಲೇಬೇಕು ಎಂಬ ಉದ್ದೇಶವಿಟ್ಟುಕೊಂಡ ಕಾಂಗ್ರೆಸ್ ಪಕ್ಷ ಕೊನೆಗಳಿಗೆಯಲ್ಲಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಆರಂಭಿಸಿ ಅದರ ಮೂಲಕ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಭಾರೀ ಹಿನ್ನೆಡೆಯೊಂದಿಗೆ ಎಲ್ಲ ಅಭ್ಯರ್ಥಿಗಳೂ ಸೋತಿದ್ದಾರೆ.ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ವಾರದೊಳಗೆ ಈ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ.ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲದೆ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕುಗಳನ್ನು ಒಳಗೊಂಡ ಈ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಮಂಗಳವಾರ ನಡೆದಿತ್ತು. ವಿವಿಧ 9 ಕಡೆಗಳಲ್ಲಿ ನಡೆದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯ ಕಂಡಿದ್ದು, ರಾತ್ರಿಯೇ ಎಲ್ಲ ಮತ ಪೆಟ್ಟಿಗೆಗಳು ಶಿವಮೊಗ್ಗದ ಮಾಮ್ಕೋಸ್ ಆವರಣಕ್ಕೆ ತರಲಾಯಿತು.ರಾತ್ರಿ ಎಂಟು ಗಂಟೆಗೆ ಮತ ಎಣಿಕೆಯ ಪ್ರಕ್ರಿಯೆ ಶುರುವಾದರೂ, ರಾತ್ರಿ 10 ಗಂಟೆ ಸುಮಾರಿಗೆ ಮತ ಎಣಿಕೆಯು ಆರಂಭಗೊಂಡಿತು. ಮೊದಲ ಎಣಿಕೆಯಿಂದ ಹಿಡಿದು ಕೊನೆಯವರೆಗೂ ಸಹಕಾರ ಭಾರತಿ ಸಂಘಟನೆಯ ಎಲ್ಲ 19 ಅಭ್ಯರ್ಥಿಗಳು ಹೆಚ್ಚಿನ ಮತ ಪಡೆದು ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿದರು. ರಾತ್ರಿ ಒಂದು ಗಂಟೆಯ ಹೊತ್ತಿಗೆ ಬಹುತೇಕ ಫಲಿತಾಂಶ ನಿಚ್ಚಳವಾಗಿತ್ತು. ಬೆಳಗ್ಗೆ 6.30 ರ ಸುಮಾರಿಗೆ ಮತ ಎಣಿಕೆ ಪೂರ್ಣಗೊಂಡಾಗ ಸಹಕಾರ ಭಾರತಿ ಅಭ್ಯರ್ಥಿ ಸಂಘಟನೆಯ ಎಲ್ಲ 19 ಅಭ್ಯರ್ಥಿಗಳು ಹೆಚ್ಚಿನ ಲೀಡ್ ನೊಂದಿಗೆ ಮತ ಪಡೆದಿದ್ದರು.ಸಂಸ್ಥೆಯಲ್ಲಿನ ಒಟ್ಟು 31 ಸಾವಿರ ಮತಗಳ ಪೈಕಿ ಅರ್ಹತೆ ಪಡೆದ ಮತದಾರರು ಇದ್ದುದು ಕೇವಲ 11,511 ಮಾತ್ರ. ಉಳಿದ ಅನರ್ಹ ಮತದಾರರ ಪೈಕಿ 6644 ಮಂದಿ ಹೈಕೋರ್ಟ್ ಮೂಲಕ ಮತದಾನಕ್ಕೆ ಅರ್ಹತೆ ಪಡೆದುಕೊಂಡರು. ಇದರಿಂದಾಗಿ ಮತದಾನದ ಹಕ್ಕು 18150 ಮಂದಿಗೆ ಲಭಿಸಿತ್ತು. ಇದರಲ್ಲಿ 12,180 ಮತದಾರರು ಮತ ಚಲಾಯಿಸಿದ್ದು, ಶೇ.67ರಷ್ಟು ಮತದಾನವಾಗಿತ್ತು.ಅತಿ ಹೆಚ್ಚು ಮತ ಪಡೆದ ಸಹಕಾರ ಭಾರತಿ ಅಭ್ಯರ್ಥಿಗಳ ವಿವರ:ಕೀತಿರಾಜ್-8046, ಎಂ.ಕುಬೇಂದ್ರಪ್ಪ-7652, ಕೆ.ವಿ.ಕೃಷ್ಣಮೂರ್ತಿ-7615, ಜಯಶ್ರೀ ಕಡಗೋಡು-7918, ತಿಮ್ಮಪ್ಪ ಶ್ರೀಧರಪುರ- 7354, ಎಚ್.ಧರ್ಮೇಂದ್ರ-7477, ಬಿ.ಸಿ.ನರೇಂದ್ರ-7783, ನಂದನ್ ಹಸಿರುಮನೆ-8009, ಜಿ.ಎಸ್.ಪ್ರಸನ್ನ ಹೆಬ್ಬಾರ್-7430, ಭರಮಪ್ಪ-7037, ಎಚ್.ಎಸ್.ಮಹೇಶ್-7871, ಕೆ.ರತ್ನಾಕರ ಯಾನೆ ಧರ್ಮಣ್ಣ-7454, ಟಿ.ಎನ್.ರಮೇಶ್-6952, ಜಿ.ಇ.ವಿರೂಪಾಕ್ಷಪ್ಪ-7331, ಯು.ವಿ.ವೀರೇಶ್- 6848, ಕಚ್ಚೋಡಿ ಶ್ರೀನಿವಾಸ್- 7642, ಎನ್.ಸತೀಶ್- 6415, ಸಹನಾ ಸುಭಾಷ್- 7041, ಸುರೇಶ್ಚಂದ್ರ-6675.ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳ ವಿವರ:
ಕಡ್ತೂರು ದಿನೇಶ್- 3800, ಪದ್ಮನಾಭ ಹಾರೊಗೊಳಿಗೆ-3564, ಅಜಿತ್.ಎ.ಕೆ -3474, ಅರವಿಂದ ಎಂ.ಡಿ. -3374, ಅನ್ನಪೂರ್ಣ ಮೋಹನ್-3348, ಬಿ.ಎಂ.ಪವಿತ್ರಾ ಮುಕುಂದ-3160, ಗಜೇಂದ್ರ ಗೌಡ ಕಮರೂರು-3108, ಎನ್.ಎಂ.ದಯಾನಂದ- 3008, ನಾಗಭೂಷಣ.ಎಂ.ಎಸ್. -2941, ಧೀರರಾಜ್ ಹೊನ್ನವಿಲೆ- 2870, ಕೆ.ಎಚ್.ಶ್ರೀಪಾಲ- 2838, ಕಾಳಮ್ಮನ ಗುಡಿ ಶಾಮಣ್ಣ- 2799, ಕೆ.ಆರ್.ಶ್ರೀನಿವಾಸ- 2773, ಜಿ.ಎಂ.ರಘು-2731, ರಮೇಶ್ ಬಳ್ಳಿಗಾವೆ-2689, ಮಂಜಪ್ಪ.ಕೆ.ಎಚ್ -2686, ಎಚ್.ಎಂ.ಕೊರ್ತೇಶ-2685, ಪಿ.ಎನ್.ಸುಬ್ಬರಾವ್-2631, ಕೆ.ಬಿ.ಭದ್ರಪ್ಪ-2396.ಈ ಎರಡು ಸಂಘಟನೆಗಳ ಹೊರತಾಗಿ ಸ್ಪರ್ಧಿಸಿದ್ದ ರುದ್ರೇಶಪ್ಪ-868 ಮತ ಗಳಿಸಿದರು.