ಕನ್ನಡಪ್ರಭ ವಾರ್ತೆ ವಿಜಯಪುರ ತೊಗರಿ ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ₹ 1.01 ಕೋಟಿ ಮೌಲ್ಯದ 500ಕ್ಕೂ ಅಧಿಕ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಶಿವಶಂಕರ ಜೀರ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 202 ಕೆಜಿ 755 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತೊಗರಿ ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ₹ 1.01 ಕೋಟಿ ಮೌಲ್ಯದ 500ಕ್ಕೂ ಅಧಿಕ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಶಿವಶಂಕರ ಜೀರ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 202 ಕೆಜಿ 755 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ಅವರು, ಆರೋಪಿಯು ದಿಂಡವಾರ ಗ್ರಾಮದಲ್ಲಿನ ಜಮೀನಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆಯ ಮದ್ಯದಲ್ಲಿ ಯಾರಿಗೂ ಗೊತ್ತಾಗದಂತೆ ಗಾಂಜಾ ಗಿಡಗಳನ್ನು ಬೆಳೆದಿದ್ದನು. ಈ ಕುರಿತು ದಿಂಡವಾರ ಗ್ರಾಮದ ಬೀಟ್ ಪೊಲೀಸರಿಗೆ ಮಾಹಿತಿ ಬಂದ ತಕ್ಷಣ, ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಎನ್‌ಡಿಪಿಎಸ್‌ ಕಾಯ್ದೆ ನಿಯಮಗಳ ಪ್ರಕಾರ ದಾಳಿ ಪ್ರಕ್ರಿಯೆ ನಡೆಸಿದರು. ಬಳಿಕ ಆತನನ್ನು ಬಂಧಿಸಿ, ಆರೋಪಿತನಿಂದ ಅಕ್ರಮ ಗಾಂಜಾ ಬೆಳೆಯನ್ನು ವಶಪಡಿಸಿಕೊಳ್ಳಲಾಗಿದೆ.ಈ ಪ್ರಕರಣದಲ್ಲಿ ಅಕ್ರಮ ಗಾಂಜಾ ಬೆಳೆ ಕುರಿತಂತೆ ಮಾಹಿತಿ ಸಂಗ್ರಹಿಸಿ, ದಾಳಿ ಕೈಕೊಂಡು ಉತ್ತಮ ಕರ್ತವ್ಯ ನಿರ್ವಹಿಸಿದ ಬಸವನಬಾಗೇವಾಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಪಿಐ ಗುರುಶಾಂತ ದಾಶ್ಯಾಳ ಹಾಗೂ ದಾಳಿಯಲ್ಲಿ ಪಾಲ್ಗೊಂಡ ಬಸವನ ಬಾಗೇವಾಡಿ ಪೊಲೀಸ್‌ ಠಾಣೆಯ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದು, ಪ್ರತ್ಯೇಕ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.ಈಗಾಗಲೇ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ ಹಾಗೂ ಬಳಕೆ ಬಗ್ಗೆ ವಿಶೇಷ ನಿಗಾವಹಿಸಿದ್ದು, ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬೀಟ್‌ ಮಟ್ಟದಲ್ಲಿಯೂ ಬೀಟ್‌ ಸಿಬ್ಬಂದಿಗಳ ಮುಖಾಂತರ ಮಾದಕ ದ್ರವ್ಯಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಈ ಬಗ್ಗೆ ಕಳೆದ ಮೂರು ತಿಂಗಳಿನಿಂದ ಆಪರೇಷನ್‌ ರೈಸ್‌ ಹಾಗೂ ಬೇಡ ಬ್ರೋ ಎಂಬ ವಿಶೇಷ ಅಭಿಯಾನ ಸೇರಿದಂತೆ ಕಾರ್ಯಾಚರಣೆ ಕೈಕೊಳ್ಳಲಾಗಿದೆ. 2026ನೇ ಸಾಲಿನಲ್ಲಿ ಒಟ್ಟು 57 ಪ್ರಕರಣಗಳನ್ನು ದಾಖಲಿಸಲಾಗಿದ್ದು, 65 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಇದುವರೆಗೆ ಒಟ್ಟು 1.30 ಕೋಟಿ ಮೌಲ್ಯದ 342 ಕೆಜಿ ಗಾಂಜಾವನ್ನು ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಪಿಐ ಗುರುಶಾಂತ ದಾಶ್ಯಾಳ ಹಾಗೂ ಸಿಬ್ಬಂದಿ ಇದ್ದರು.

ಕೋಟ್: ಈಗಾಗಲೇ ವಿಜಯಪುರ ಜಿಲ್ಲಾ ಪೊಲೀಸ್‌ ವತಿಯಿಂದ ಈ ರೀತಿಯ ಮಾದಕ ದ್ರವ್ಯಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್‌ ಇಲಾಖೆಗೆ ತಿಳಿಸಬೇಕು. ಸಾರ್ವಜನಿಕರು ಮಾಹಿತಿ ನೀಡಿ, ಮಾದಕ ದ್ರವ್ಯಗಳ ನಿರ್ಮೂಲನೆಗೆ ಪೊಲೀಸ್‌ ಇಲಾಖೆಯೊಂದಿಗೆ ಸಹಕಾರ ನೀಡಬೇಕು.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ