ತಾಳೂರು ರಸ್ತೆಯ ಗುರುಕುಲ ವಸತಿ ಶಾಲೆಯಲ್ಲಿ ಸಹಪಾಠಿಗಳ ಮೇಲೆ ಕಬ್ಬಿಣದ ರಾಡ್ನಿಂದ ದಾಳಿ ನಡೆಸಿ ಒಬ್ಬನ ಹತ್ಯೆಗೈದು ಪರಾರಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗುರುಕುಲ ಶಾಲೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಇಲ್ಲಿಯ ತಾಳೂರು ರಸ್ತೆಯ ಗುರುಕುಲ ವಸತಿ ಶಾಲೆಯಲ್ಲಿ ಸಹಪಾಠಿಗಳ ಮೇಲೆ ಕಬ್ಬಿಣದ ರಾಡ್ನಿಂದ ದಾಳಿ ನಡೆಸಿ ಒಬ್ಬನ ಹತ್ಯೆಗೈದು ಪರಾರಿಯಾಗಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗುರುಕುಲ ಶಾಲೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ.ನಗರದ ವಿವಿಧೆಡೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬಾಲಕ ಸೈಕಲ್ ಮೇಲೆ ಓಡಾಡುತ್ತಿರುವುದು ಹಾಗೂ ಮೊಬೈಲ್ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿತ್ತು. ಸಿಸಿಟಿವಿಯಲ್ಲಿನ ಆತನ ಚಲನವಲನ ಪರಿಶೀಲಿಸಿ, ಇಲ್ಲಿನ ಗಂಗಪ್ಪ ಜಿನ್ ಬಳಿಯ ಖಾಸಗಿ ಲೇಔಟ್ ಪ್ರದೇಶದಲ್ಲಿ ಬಾಲಕ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಳಿಕ, ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಬಳ್ಳಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದು, ಮಾನಸಿಕ ರೋಗ ತಜ್ಞರು ಹಾಗೂ ಇತರ ವೈದ್ಯರು ಬಾಲಕನ ಕೌನ್ಸೆಲಿಂಗ್ ನಡೆಸಲಿದ್ದಾರೆ. ಇಲ್ಲಿ ಬಾಲಕನ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬಳಿಕ ತನಿಖಾಧಿಕಾರಿಗಳು ಬಾಲಕನಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಮೋಟೊ ಪ್ರಕರಣ ದಾಖಲು:ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ ಸೋಮವಾರ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ವಹಿಸಲಾದ ಕ್ರಮಗಳು, ಹಲ್ಲೆಗೆ ಒಳಗಾಗಿ ಮೃತಪಟ್ಟ ಬಾಲಕ ಮತ್ತು ಗಾಯಗೊಂಡ ವಿದ್ಯಾರ್ಥಿಗಳಿಗೆ ಒದಗಿಸಲಾದ ಪರಿಹಾರೋಪಾಯಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಆಯೋಗದಿಂದ ಪತ್ರ ಬರೆಯಲಾಗಿದೆ.ವಸತಿ ಶಾಲೆಗೆ ಅನುಮತಿ ಇರಲಿಲ್ಲ:
ಈ ಮಧ್ಯೆ, ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಸತಿ ನಿಲಯಕ್ಕೆ ಅನುಮತಿ ಪಡೆದುಕೊಂಡಿರಲಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವಸತಿ ಶಾಲೆಯ ಮಕ್ಕಳನ್ನು ನೋಡಿಕೊಳ್ಳಲು ಪುರುಷ ವಾರ್ಡನ್ ನೇಮಕ ಮಾಡಿಕೊಳ್ಳಲಾಗಿಲ್ಲ. ರಾತ್ರಿ ಪಾಳೆಯದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾವುದೇ ಸಿಬ್ಬಂದಿಯನ್ನು ನೇಮಿಸಿಕೊಂಡಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿಯಲ್ಲಿ ತಿಳಿದು ಬಂದಿದೆ.ಶಾಲೆ ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಧರಣಿ:ನಗರದ ತಾಳೂರು ರಸ್ತೆಯ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ ನಡೆದ ದಾಳಿ ಪ್ರಕರಣ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಡ್ರಗ್ಸ್, ಗಾಂಜಾ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿ-ಯುವಕರು ಹಾದಿ ತಪ್ಪುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೇ ಹೋದಲ್ಲಿ ಎಬಿವಿಪಿಯಿಂದ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟ ವಿದ್ಯಾರ್ಥಿಗಳು, ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.