ಗಂಗಾವತಿ ನಗರದ ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬುಧವಾರ ನಡೆದಿದೆ.
ಗಂಗಾವತಿ: ನಗರದ ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಕ್ಲಿಕ್ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ ಘಟನೆ ಬುಧವಾರ ನಡೆದಿದೆ.
ಮಾನ್ವಿಯ ರಾಮಾಂಜನೇಯ ಎನ್ನುವ ವ್ಯಕ್ತಿ ಏಟು ತಿಂದಿದ್ದಾನೆ. ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಬರುವ, ಹೋಗುವ ಮಹಿಳೆಯರು, ಹುಡುಗಿಯರ ಮತ್ತು ಅದರಲ್ಲೂ ವಿದ್ಯಾರ್ಥಿನಿಯರ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವುದನ್ನು ಕೆಲವರು ಗಮನಿಸಿದ್ದಾರೆ. ಅದನ್ನು ನೋಡಿದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದಾಗ ನೂರಾರು ಜನರು ಆತನನ್ನು ಹಿಡಿದು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಆತನ ಮೊಬೈಲ್‌ನಲ್ಲಿ ನೂರಾರು ಹುಡುಗಿಯರ ಫೋಟೋ ಪತ್ತೆಯಾಗಿದೆ.ರಾಯಚೂರು ಜಿಲ್ಲೆಯ ಮಾನ್ವಿಯ ನಗರದ ರಾಮಾಂಜನೇಯ ಟಿವಿ ರಿಪೇರಿ ಮಾಡುವ ವೃತ್ತಿ ಮಾಡುತ್ತಾನೆ. ಬಸ್ ನಿಲ್ದಾಣದಲ್ಲಿರುವ ಮಹಿಳೆಯರು ಫೋಟೋ ತೆಗೆಯುವುದು ಆತನ ಚಾಳಿ. ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿಗಳು ಮೊಬೈಲ್ ಕಸಿದು ನೋಡಿದಾಗ ಫೋನ್‌ನಲ್ಲಿ ನೂರಾರು ಮಹಿಳೆಯರ ಫೋಟೋ ಮತ್ತು ಅಶ್ಲೀಲ ಚಿತ್ರಗಳು ಇದ್ದವು.
ಭದ್ರತೆ ಇಲ್ಲ: ನಗರದ ಬಸ್ ನಿಲ್ದಾಣದಲ್ಲಿ ಪೊಲೀಸರು ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯವರು ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲದಿರುವುದು ಇಂತಹ ಕೃತ್ಯಗಳು ನಡೆಯಲು ಕಾರಣ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ನಿತ್ಯ ಮಹಿಳೆಯರು ಮಾಂಗಲ್ಯ, ಮೊಬೈಲ್ ಕಳ್ಳತನ, ಇತರ ಕಾನೂನುಬಾಹಿರ ಚಟುವಟಿಕೆ ನಿಲ್ದಾಣದಲ್ಲಿ ನಡೆಯುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ನಿತ್ಯ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿನಿಯರಿಗೆ ಕಿರುಕುಳ, ಹಲ್ಲೆಯಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ. ಈ ಹಿಂದೆ ಸಾರಿಗೆ ಸಂಸ್ಥೆಯವರು ಮತ್ತು ಪೊಲೀಸ್ ಇಲಾಖೆಯವರು ಸಿಬ್ಬಂದಿ ನಿಯೋಜಿಸಿದ್ದರು. ಈಗ ಇಲ್ಲಿ ಯಾರೂ ಇಲ್ಲದ ಕಾರಣ ಇಂತಹ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ.ಬಾರದ ಪೊಲೀಸರು: ಮಹಿಳೆಯರ ಫೋಟೋ ತೆಗೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾರೂ ಸ್ಥಳಕ್ಕೆ ಬಾರದೆ ಇರುವುದರಿಂದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ವಿದ್ಯಾರ್ಥಿಗಳು ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿದರು. ಅಲ್ಲದೇ ಶ್ರೀಕೃಷ್ಣದೇವರಾಯ ವೃತ್ತದಲ್ಲಿಯೂ ಸುತ್ತಾಡಿಸಿದರು. ಇಷ್ಟೆಲ್ಲ ಘಟನೆ ನಡೆದರೂ ಪೊಲೀಸರು ಗಮನಹರಿಸಲೇ ಇಲ್ಲ. ಮಹಿಳೆಯರಿಂದ ತಮಗೆ ರಕ್ಷಣೆ ಇಲ್ಲ ಎಂಬ ಕೂಗು ಕೇಳಿ ಬಂದಿತು.