ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದರೋಡೆ ನಡೆಸುವ ಉದ್ಧೇಶದಿಂದ ಬಂದಿದ್ದ ಆರೋಪಿ ಸ್ಥಳದಿಂದ ಪರಾರಿಯಾಗಲು ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.ಮೂರು ಸಲ ಫೈರಿಂಗ್ ಮಾಡಿರುವ ಆರೋಪಿ, ಎರಡು ಸಲ ಮಿಸ್ ಫೈರ್ ಆಗಿದ್ದು, ಮೂರನೇ ಸಲ ಹಾರಿಸಿದ ಗುಂಡು ಮಹಿಳೆಯ ಬಲಗಾಲಿಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಬಸವ್ವ ಹೊಳೆಪ್ಪ ಮುಗಳಿಯನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗುಂಡು ಹಾರಿಸಿದ ಆರೋಪಿ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದ 30 ವಯಸ್ಸಿನ ಪ್ರಶಾಂತ ನಾವಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನೆರೆಹೊರೆಯವರು ಆರೋಪಿಯನ್ನು ಹಿಡಿದು ಥಳಿಸಿದ್ದರಿಂದ ಆತನನ್ನು ಚಿಕಿತ್ಸೆಗಾಗಿ ಬಾದಾಮಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಬಗ್ಗೆ ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: ಶನಿವಾರ ರಾತ್ರಿ ಪ್ರಶಾಂತ ನಾವಿ ಎನ್ನುವ ಆರೋಪಿ ಬೈಕ್ ಮೇಲೆ ಬಂದು ಕರಡಿಗುಡ್ಡ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಮೊದಲು ಖಾಲಿ ಮನೆಯೊಂದಕ್ಕೆ ಹೋದಾಗ ಅಲ್ಲಿ ಆತನಿಗೆ ಏನು ಸಿಕ್ಕಿಲ್ಲ. ಬಳಿಕ ಗ್ರಾಮದ ಮನೆಯ ಮುಂದೆ ಮಲಗಿದ್ದ ವೃದ್ಧ ದಂಪತಿಯನ್ನು ಗಮನಿಸಿ ಅಲ್ಲಿಗೆ ಹೋಗಿದ್ದಾನೆ. ಅವರ ಕೊರಳಲ್ಲಿ ಏನಾದರೂ ಚಿನ್ನಾಭರಣ ಇವೆಯಾ ಎಂದು ಪರಿಶೀಲಿಸುವ ವೇಳೆ, ವೃದ್ಧ ಹೊಳೆಪ್ಪ ಮುಗಳಿ ಎಚ್ಚರಗೊಂಡು ಕಳ್ಳನನ್ನು ಹಿಡಿದುಕೊಂಡಿದ್ದಾನೆ. ಆಗ ಆತನಿಂದ ಬಿಡಿಸಿಕೊಂಡು ಪರಾರಿಯಾಗಲು ತನ್ನ ಬಳಿ ಇದ್ದ ನಾಡ ಪಿಸ್ತೂಲ್‌ನಿಂದ ಮೊದಲು ಎರಡು ಸಲ ಗುಂಡು ಹಾರಿಸಿದ್ದು, ಅವು ಮಿಸ್ ಫೈರ್ ಆಗಿವೆ. ಮೂರನೇ ಗುಂಡು ಹೊಳೆಪ್ಪನ ಪತ್ನಿ ಬಸವ್ವಳ ಬಲಗಾಲಿಗೆ ಬಿದ್ದಿದೆ.ಗುಂಡೇಟಿನ ಸದ್ದಿನಿಂದ ನೆರೆಹೊರೆಯವರು ಎಚ್ಚರಗೊಂಡು ಸ್ಥಳಕ್ಕೆ ಬಂದು ಆರೋಪಿಯನ್ನು ಹಿಡಿದು ಚೆನ್ನಾಗಿ ಥಳಿಸಿ ಬಾದಾಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.