ಸಾರಾಂಶ
ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿ) ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ವರ್ಲಿಗ್ರಾಮದ ಪೊಲರ್ಪು ಶ್ರೀರಾಮುಲು(24) ಬಂಧಿತ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೇಯಿಂಗ್ ಗೆಸ್ಟ್‌ಗಳಲ್ಲಿ (ಪಿಜಿ) ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಖದೀಮನೊಬ್ಬನನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ವರ್ಲಿಗ್ರಾಮದ ಪೊಲರ್ಪು ಶ್ರೀರಾಮುಲು(24) ಬಂಧಿತ.ಆರೋಪಿಯಿಂದ ಐದು ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ ಒಂಬತ್ತು ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾರತಹಳ್ಳಿ ಪಿ.ಜಿ.ವೊಂದರಲ್ಲಿ ಇರ್ಫಾನ್ ಅಲಿಖಾನ್ ಎಂಬುವವರ ಲ್ಯಾಪ್ ಟಾಪ್ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಶ್ರೀರಾಮುಲು ಬಿಟೆಕ್ ಪದವಿಧರನಾಗಿದ್ದು, ರಾಜಾಜಿನಗರದ ಪಿ.ಜಿ.ವೊಂದರಲ್ಲಿ ನೆಲೆಸಿದ್ದ. ಆರಂಭದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಆರೋಪಿಯು ಸಂಬಳ ಸಾಲದ ಹಿನ್ನೆಲೆಯಲ್ಲಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳ್ಳತನವನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ.ಪಿಜಿಗಳೇ ಟಾರ್ಗೇಟ್ : ಪಿ.ಜಿ.ಗಳನ್ನೇ ಟಾರ್ಗೆಟ್ ಮಾಡಿ ಆರೋಪಿ ಶ್ರೀರಾಮುಲು ಲ್ಯಾಪ್ ಟಾಪ್‌ಗಳನ್ನು ಕಳವು ಮಾಡುತ್ತಿದ್ದ. ಕದ್ದ ಲ್ಯಾಪ್ ಟಾಪ್‌ಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದ. ಈ ಹಿಂದೆಯೂ ಸಹ ಲ್ಯಾಪ್ ಟಾಪ್ ಕಳವು ಮಾಡಿ ಸಿಕ್ಕಿಬಿದ್ದು ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಕಳ್ಳತನ ಕೃತ್ಯ ಮುಂದುವರೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಆರೋಪಿಯ ಬಂಧನದಿಂದ ಗಿರಿನಗರ ಮತ್ತು ಮಾರತಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಎರಡು ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.